top of page
Writer's pictureಮಹೇಂದ್ರ ಸಂಕಿಮನೆ

ಕರುಣಿಸು ಜಗದಂಬೆ ಶ್ರೀ ಮಾರಿಕಾಂಬೆ..

#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__1

ಜಾತ್ರೆಯ ಸಮಯದ ದಿನಾಂಕ ನಿಗದಿಯಾದಂದಾಗಿನಿಂದ ಎಲ್ಲ ಕಡೆ ಜಾತ್ರೆಯ ತಯಾರಿ. ದಿನ ಸಮೀಪಿಸಿದಂತೆ ತುಡಿತ ಹೆಚ್ಚಾಗಿ ಎಲ್ಲೆಂದರಲ್ಲಿ ಜಾತ್ರಾ ಛಾಯೆ ಕಳೆಗಟ್ಟಿದೆ. ಶಿರಸಿಯಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿ ನಾಡಿನ ಮೂಲೆ ಮೂಲೆಗಳಿಂದ ಜನರನ್ನು ಬರಮಾಡಿಕೊಳ್ಳಲು ನಗರ ಸಜ್ಜಾಗಿದೆ. ಪೋಸ್ಟರ್ ಗಳು, ಜಾಹೀರಾತುಗಳು, ನಾಟಕದ ಪ್ರಚಾರ, ಅಂಗಡಿಗಳ ಹರಾಜು , ಏನು ಅಬ್ಬರ ಅಬ್ಬಬ್ಬಾ.. ಶಾಂತವಾಗಿದ ಜನತೆಯಲ್ಲಿ ಜಾತ್ರೆಯ ಗೌಜಿ ಮನೆ ಮಾಡತೊಡಗಿದೆ. ಜನ ಮರುಳೋ.ಜಾತ್ರೆಯೋ..’ ಎಂಬಂತೆ ಎಲ್ಲ ಅಂಶಗಳು ಕೇವಲ ವ್ಯವಹಾರಿಕ ವಾಗಿರುವ ಈ ಸಂದರ್ಭದಲ್ಲಿ ಮಾರಿಕಾಂಬೆಯ ಕುರಿತು ತಿಳಿಯದೇ ಬರೀ ರಂಗಾಣಿ ಪೀಪ್ಳಿ, ಬಜಾರು ಬಳೇ ಪೇಟೆ, ಮಿಠಾಯಿ, ಮಂಡಕ್ಕಿ, ಜಿಲೇಬಿ ತಿಂದು ನಾಲ್ಕಾರು ಬಾರಿ ಎಲ್ಲ ಕಡೆ ತಡರಾತ್ರಿಯವರೆಗೆ ತಿರುಗಿ ಬಿಟ್ಟರೆ ಆಯಿತೇ, ಕೆಲವರಿಗೆ ಜಾತ್ರೆ ಎಂದರೆ ಇಷ್ಟೇ. ಹಲವಾರು ಜನರಿಗೆ ಜಾತ್ರೆಯ, ದೇವಿ ಶ್ರೀ ಮಾರಿಕಾಂಬೆಯ ಕುರಿತು ಕುತೂಹಲವಂತೂ ಇದ್ದೇ ಇದೆ. ಅದನ್ನರಿಯದೇ ಒಂಬತ್ತು ದಿನ ಆಕಂಠ ಉದರಂಭರಣ ಮಾಡಿ ಕಾಲಾಡಿ ಕೂಗಾಡಿ ಕಳೆದರೇನು ಬಂತು..?


ಈ ವರ್ಷ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಡಗರ. ಕುರಿತಾಗಿ ಬರೆಯಬೇಕು ಎನ್ನುವ ತವಕ ತುಡಿತ. ಮಾರಿಕಾಂಬೆಯ ಕುರಿತಾಗಿ ನುಡಿ ಸೇವೆಯ ಕಿಂಚಿತ್ಕಾರ್ಯ ಸಲ್ಲಿಸಿ ಕೃಪೆ ಗಳಿಸಬೇಕೆಂಬ ಪ್ರಬಲ ಇಚ್ಛೆ. ಪ್ರಜ್ನಾವಂತರೆಂದೂ ಸುಸಂಕೃತ ಎಂದು ಕರೆಯಲ್ಪಟ್ಟವರು ಈ ಭಾಗ ಜನರು. ಓದುವ ಸ್ವಭಾವ ಇರುವ ಸಾಕ್ಷರರು, ರಾಕ್ಷಸರಲ್ಲ. ಬರೀ ಜಾತ್ರೆಯ ಆಡಂಬರಕ್ಕೆ ಮರುಳಾಗದ ಜನರೆಂಬ ನಂಬಿಕೆಯಿಂದ ಆಸಕ್ತರು ಮತ್ತು ಆಸ್ತಿಕರ ಸಲುವಾಗಿ ಈ ಮಾಹಿತಿ ಒದಗಿಸಬೇಕೆನಿಸಿದೆ. ದೇವಿಯ ಕೃಪೆ ಎಲ್ಲರಿಗೂ ಆಗಲಿ ಎಂಬ ಸದಾಶಯ.


'ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ' ಎಂಬ ಸೂಕ್ತಿಯಂತೆ ತಿಳಿಯುವಿಕೆಗಿಂತ ಸರಿಸಾಟಿಯಾದದ್ದು ಯಾವುದೂ ಇಲ್ಲ , ಹಾಗಾಗಿ ನಮ್ಮ ಹೆಮ್ಮೆಯ ಶಿರಸಿಯ ಈ ಮಹೋತ್ಸವ ತಿಳಿದು ಆಚರಿಸಬೇಕಾದ ಸಂಗತಿ.


ನಮ್ಮ ನಾಡಿನ ಸೊಗಡು..


ಶಿರಸಿ ಸ್ವಾಭಾವಿಕವಾಗಿ ಉನ್ನತ ಭೂಪ್ರದೇಶದಲ್ಲಿದ್ದು , ನಾಡಿನೆಲ್ಲೆಡೆ ಮೂರ್ಧನ್ಯ ಸ್ಥಾನ ಹೊಂದಿದೆ. ಶಿರಸಿ ಸಂಜಾತರು ದೇಶ ವಿದೇಶದ ಮಹೋನ್ನತ ಸ್ಥಾನಗಳನ್ನು ಅಲಂಕರಿಸುವುದಂತೂ ಸರ್ವ ವಿದಿತ. ಇಲ್ಲಿನ ಭಾಷೆ ಮಜವಾಗಿದೆ. ಸೊಗಸಿಗೆ ಬೇಡರ ವೇಷವಿದೆ. ಅಡುಗೆಯಲ್ಲಿ ಸಹ ಅಪ್ರತಿಮ ಸೊಗಸು ವಿಶೇಷ ವೈವಿಧ್ಯತೆ. ಜಲಪಾತಗಳ ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿದ ಪ್ರವಾಸಯೋಗ್ಯ ಪ್ರದೇಶ. ಹೇಳುತ್ತಹೋದರೆ ಪಟ್ಟಿ ಮುಂದುವರಿಯುತ್ತದೆ. ಒಟ್ಟಿನಲ್ಲಿ ಶಿರಸಿ ಸ್ವರ್ಗಕ್ಕೆ ಸಮ ಎಂದರೆ ಅತಿಶಯೋಕ್ತಿ ಆಗಲಾರದೇನೋ.. ಇವೆಲ್ಲದರ ಜೊತೆಗೆ ತನ್ನತನದ ಸೊಗಡುಳ್ಳ ಜಾತ್ರೆ, ಹೇಳಲೇಬೇಕಾಗಿದ್ದು.

ಅಂದಹಾಗೇ, ಬೇಡರ ವೇಷ ಹಾಗೂ ಜಾತ್ರೆ ಎರಡಕ್ಕೂ ವಿಶೇಷ ಸಂಬಂಧ, ಸಾಮ್ಯ ಎರಡೂ ಇದೆ.


ಹೊರಗಿನ ಜನ ನಿಮ್ಮೂರ ಜಾತ್ರೆ ಅಂತೆ ..ಕರಿಯುದಿಲ್ಲವಾ !! ಎಂತ ಮರಾಯ/ಯ್ತಿ ..? ಎಂದು ಕೇಳುವರು. ಎಲ್ಲರಿಗೂ ಸಹ ಶಿರಸಿಯ ಜನ ಎಂದರೆ ಒಂದು ರೀತಿಯ ನಂಬುಗೆಯ ಮನೋಭಾವ ಇದೆ.ಲಾಗಾಯ್ತಿನಿಂದಲೂ ಪ್ರಮುಖ ವಾಣಿಜ್ಯ ವಹಿವಾಟಿನ ಪ್ರದೇಶ. ಎತ್ತರದಲ್ಲಿದೆ ಎಂದ ಮಾತ್ರಕ್ಕೆ ಶಿರಸಿ ಅಲ್ಲ, ಪ್ರಾಚೀನದಿಂದ ಶಿರಿಷ ಪುಷ್ಪ ಬೀಡು ಇದು. ಹಾಗಾಗಿ ಶೀರಿಷಪುರ-ಶಿರಿಯೂರು-ಶಿರಸಿ. ಅಘನಾಶಿನೀ ಮತ್ತು ಶಾಲ್ಮಲಾ ನದಿಗಳ ತವರೂರು ನಮ್ಮ ಹೆಮ್ಮೆಯ ಶಿರಸಿ. ಶ್ರೀ ಮಾರಿಕಾಂಬೆ ಈ ಶಿರಸಿಯ ಅರಸಿ. ಎರಡು ವರ್ಷಗಳಿಗೊಮ್ಮೆ ನಡೆವ ಮಾರಿ ಜಾತ್ರೆ ಕರ್ನಾಟಕದ ಅತಿದೊಡ್ದ ಜಾತ್ರೆ ಎಂತಲೂ ಪ್ರಸಿದ್ಧಿ.


ಶಿರಸಿಯ ಮಾರೆಮ್ಮ, ಸಂಸ್ಕೃತೀಕರಣದ ನಂತರ ಮಾರಿಕಾಂಬೆ. ಜಾತಿ ಮತಗಳ ಭೇದವಿಲ್ಲದೇ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರಳಾದ ದೇವಿ. ಈ ಅಂಬೆಯ ಮುಂದೆ ಕರ್ಮಠರಾದ ವೈದಿಕರೂ ತಲೆ ಬಾಗುತ್ತಾರೆ. ಲಿಂಗಾಯತರೂ ಶರಣೆನ್ನುತ್ತಾರೆ. ಹಿಂದೂಗಳಲ್ಲದವರೂ ನಮಸ್ಕರಿಸುವ ಬಹಳ ದೊಡ್ದ ಸಂಖ್ಯೆಯ ಭಕ್ತವರ್ಗದವರಿದ್ದಾರೆ. ಮಾತೆಯ ಮಮತೆಗೆ ಮಕ್ಕಳಲ್ಲಿ ತಾರತಮ್ಯವೆಲ್ಲಿಯದು..?

ನಂಬಿ ಬಂದವರನ್ನೆಲ್ಲ ಕರುಣೆಯಿಂದ ಕಾಪಾಡುವುದು ತಾಯಿಯ ಹಿರಿಮೆ. ಆಚಾರ್ಯ ಶಂಕರರು ಒಂದು ಮಾತು ಹೇಳಿದ್ದಾರೆ..”ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತೀ..” ಕೆಟ್ಟ ಮಕ್ಕಳಿರಬಹುದು, ಆದರೆ ತಾಯಿ ಎಂದೂ ಕೆಟ್ಟವಳಿರಲಾರಳು ಎಂದು. ಮನುಜರಾದ ಮೇಲೆ ತಪ್ಪು ಮಾಡುವುದು ಸಹಜ. ನಂತರ ಪಶ್ಚಾತ್ತಾಪ ಪಟ್ಟು ತಾಯಿ ಬಳಿ ಓಡಿ ಬಂದು ಬೇಡುವುದೂ ನಿಜ. ಮಾತಾ ಸ್ವರೂಪಿ ಆಕೆ ಮಕ್ಕಳ ತಪ್ಪನ್ನೆಲ್ಲ ಸಹಿಸುತ್ತಾಳೆ. ಪಾಪ ತೊಳೆಯುತ್ತಾಳೆ. ಶಿಕ್ಷಿಸುತ್ತಾಳೆ. ರಕ್ಷಿಸುತ್ತಾಳೆ. ಪೊರೆಯುತ್ತಾಳೆ.


ಮಾರಿಕಾಂಬೆಯ ಕಥೆ ಗೊತ್ತೇ ?


ಶಿರಸಿಯ ಮಾರೆಮ್ಮನ ಬಗ್ಗೆ ಪರಂಪರೆಯಿಂದ ಬಂದ ಐತಿಹ್ಯವಿದೆ. ಯಾವ ಪುರಾಣದಲ್ಲಿಯಾಗಲೀ ಮಾರಿಕಾಂಬೆಯ ಹೆಸರಾಗಲೀ ಈ ಕತೆಯಾಗಲೀ ಬಂದಿರುವುದಿಲ್ಲ. ಆದರೆ ಶಿರಸಿಯ ಮಣ್ಣಿನ ಕಣಕಣದಲ್ಲಿ ಈ ಕಥೆ ನೆಲೆಯಾಗಿದೆ. ಆ ಕತೆ ಹೀಗಿದೆ..

ಬಹಳ ಕಾಲದ ಹಿಂದೆ ಒಬ್ಬ ಮಾದಿಗರ ಹುಡುಗನಿಗೆ ವೈದಿಕ ಗ್ರಂಥಗಳನ್ನು ಕಲಿಯಬೇಕೆಂಬ ಬಯಕೆಯಾಯಿತು. ಜಾತಿ ಪದ್ಧತಿ ಜನಜೀವನವನ್ನು ಪ್ರಬಲವಾಗಿ ನಿಯಂತ್ರಿಸುತ್ತಿದ್ದ ಕಾಲವದು. ಇಂತಹ ಸಂದರ್ಭದಲ್ಲಿ ಒಬ್ಬ ಮಾದಿಗರ ಹುಡುಗ ಬ್ರಾಹ್ಮಣರ ಮನೆಯಲ್ಲಿ ವೈದಿಕ ಗ್ರಂಥಗಳನ್ನು ಓದುವುದು ಹೇಗೆ ಸಾಧ್ಯ ? ಆದರೆ ಆ ಮಾದಿಗರ ಹುಡುಗ ಅಷ್ಟು ಸುಲಭದಲ್ಲಿ ಬಿಡಲು ಸಿದ್ಧನಿರಲಿಲ್ಲ. ಅವನ ಅಭೀಪ್ಸೆ ಅದಮ್ಯವಾಗಿತ್ತು. ಏನಕೇನಾಪಿ ಪಡೆಯುವ ಛಲವಿತ್ತು. ದಿಟ್ಟ ಹಂಬಲವಿತ್ತು.


ಆತ ವೇಷ ಬದಲಿಸಿಕೊಂಡ. ಸ್ವಾಭಾವಿಕವಾಗಿ ಬ್ರಾಹ್ಮಣರ ಆಚಾರ ವಿಚಾರಗಳ ಪರಿಚಯ ಇದ್ದಕಾರಣ ಬ್ರಾಹ್ಮಣರ ಹುಡುಗನಂತೆ ನಟಿಸಿ, ಒಬ್ಬ ಬ್ರಾಹ್ಮಣ ಪಂಡಿತರ ಮನೆಯನ್ನು ಸೇರಿಕೊಂಡ. ಈ ಹುಡುಗನ ನಯ ವಿನಯ ಕಂಡು ಆ ಬ್ರಾಹ್ಮಣ ಇವನಿಗೆ ಎಲ್ಲಾ ವಿದ್ಯೆಗಳನ್ನು ಉಪದೇಶಿಸಿದ. ಅಲ್ಲದೇ ಸಕಲ ಪ್ರತಿಭಾ ಸಂಪನ್ನನಾದ ಈ ಶಿಷ್ಯನಿಗೆ , ತನ್ನ ಸ್ವಂತ ಮಗಳನ್ನೇ ಮದುವೆ ಮಾಡಿಕೊಟ್ಟ. ಸ್ಪುರದ್ರೂಪಿಯಾದ ಬ್ರಾಹ್ಮಣ ಕುವರಿ ಎಷ್ಟು ಸುಂದರಿಯೋ ಅಷ್ಟೇ ಬುದ್ಧಿವಂತೆಯೂ ಆಗಿದ್ದಂಥವಳು. ತನಗೆ ಪಾಂಡಿತ್ಯಕ್ಕೆ ಸಮನಾದ ವರ ದೊರೆತನೆಂದು ಸಂತೋಷವೂ ಆಯಿತು.

ಗುರುಕುಲದಿಂದ ಮಡದಿಯೊಂದಿಗೆ ಮರಳಿ ಸ್ವಂತ ಮನೆಯಲ್ಲಿ ವಾಸ ಮಾಡತೊಡಗಿದ. ಮಕ್ಕಳು ಸಹ ಜನಿಸಿದರು. ಆದರೆ ಈ ಮಾದಿಗನಿಗೆ ತನ್ನ ಪೂರ್ವ ಸಂಸ್ಕಾರ ವಾಸನೆ ಕಾಡತೊಡಗಿತು. ಅವನ ನಾಲಿಗೆ ಮಾಂಸದ ಅಡಿಗೆಗಾಗಿ ಹಾತೊರೆಯುತ್ತಿತ್ತು.. ಆದರೆ ಹೆಂಡತಿಯ ಮುಂದೆ ಈ ವಿಷಯವನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಮತ್ತೇನು ಮಾಡುವುದು? ಕದ್ದು ತಿನ್ನುವುದೊಂದೇ ದಾರಿ. ಹೀಗೆ ಅವನು ಆಗೊಮ್ಮೆ ಈಗೊಮ್ಮೆ ಮನೆಯಿಂದ ಹೊರಟು ಗುಟ್ಟಾಗಿ ತಮ್ಮ ಕೇರಿಯ ಜನರೊಡನೆ ಬೆರೆತು ಬಾಡೂಟ ಉಂಡು ಬರಹತ್ತಿದ. ಕುಶಾಗ್ರಮತಿಯಾದ ಬ್ರಾಹ್ಮಣಿಯ ಬುದ್ಧಿಗೆ ಇದರ ಸುಳಿವು ಸಿಕ್ಕಿ ಹೋಯಿತು. ಸಂಶಯ ಮನಸ್ಸನ್ನು ಹೊಕ್ಕಿ ಕಾಡತೊಡಗಿತು. ಆದರೂ ಪ್ರತ್ಯಕ್ಷ ವಾಗಿನೋಡಿ ಪ್ರಮಾಣಿಸಿಕೊಳ್ಳಬೇಕಲ್ಲವೇ..? ಅವಳು ಒಂದು ದಿನ ಗಂಡನ ಬೆನ್ನ ಹಿಂದೆ ಗುಟ್ಟಾಗಿ ಹಿಂಬಾಲಿಸಿದಳು. ಮರೆಯಲ್ಲಿ ಅವಿತು ಎಲ್ಲವನ್ನೂ ಕಣ್ಣಾರೆ ಕಂಡಳು. ಕಣ್ಣೀರು ಬಂತು. ಮರುಕ್ಷಣವೇ ಸಿಟ್ಟಾಗಿ ಕೆಂಡಾ ಮಂಡಲವಾದಳು, ರೊಚ್ಚಿಗೆದ್ದಳು. ನಾರಿಯಾಗಿ ತನ್ನ ಸರ್ವಸ್ವವನ್ನೂ ಒಪ್ಪಿಸಿದ್ದ ಬ್ರಾಹ್ಮಣಿ ಈಗ ಮಾದಿಗನಿಗೆ ಮಾರಿಯಾದಳು. ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಅನ್ವರ್ಥಕವಾಯಿತು.

ತನಗೆ, ತನ್ನ ತಂದೆಗೆ ಆತ ಮಾಡಿದ ವಂಚನೆಗೆ ಸೇಡು ತೀರಿಸಿಕೊಳ್ಳಲು ತಯಾರಾದಳು. ಅದಕ್ಕಾಗಿ ತಂದೆಯ ಅನುಮತಿ ಪಡೆಯಲು ತವರಿಗೆ ಬಂದಳು. ನೇರವಾಗಿ ತಂದೆಯನ್ನು ಕೇಳುವಂತಿಲ್ಲ. ಸೂಚ್ಯವಾಗಿ ತಂದೆಯಲ್ಲಿ ಕೇಳಿದಳು ; ಅಪ್ಪಾ, ನಾಯಿ ಮುಟ್ಟಿದ ಗಡಿಗೆಯನ್ನು ಏನು ಮಾಡಬೇಕಪ್ಪಾ ? ಅದರ ಶುದ್ಧೀಕರಣದ ಬಗೆ ಹೇಗೆ ’ಎಂದು. ತಂದೆ ಹಿಂದೆಮುಂದೆ ಯೋಚಿಸಲಿಲ್ಲ. ಸ್ವಾಭಾವಿಕವಾಗಿ ’ಬೆಂಕಿಯಲ್ಲಿ ಸುಟ್ಟುಬಿಡು, ಅಂದರೆ ಶುದ್ಧವಾದಂತೆಯೇ” ಎಂದು ಉತ್ತರನೀಡಿದರು. ಈ ಮಾತಿನಿಂದ ಆಕೆ ಆತ್ಮಾರ್ಪಣೆಯೇ ಶುದ್ಧಿಯ ದಾರಿ ಎಂಬ ತೀರ್ಮಾನಕ್ಕೆ ಬಂದಳು.


ರಾತ್ರಿಯ ಹೊತ್ತು ಗಂಡ ಮಕ್ಕಳು ಮಲಗಿದ್ದಾಗ ಮನೆಗೆ ಬೆಂಕಿ ಇಟ್ಟು ತಾನೂ ಅದರಲ್ಲಿ ಬಿದ್ದು ದೇಹತ್ಯಾಗ ಮಾಡಬೇಕೆಂದು ಆಕೆ ಆಲೋಚಿಸಿದಳು. ಆದರೆ ಬೆಂಕಿಯ ಜ್ವಾಲೆ ಕಂಡು ಗಂಡ ಮಕ್ಕಳು ಎಚ್ಚರಗೊಂಡು ಹೊರಕ್ಕೆ ಓಡಿಬಂದರು. ಇವಳು ಬಿಡುವಳೇ? ಚಂಡಿಯಂತೆ ವ್ಯಗ್ರಳಾಗಿದ್ದಳು. ಗಂಡನ ಬೆನ್ನಟ್ಟಿ ಆತನೊಡನೆ ಸೆಣಸಾಡಿ ಆತನನ್ನು ಎಳೆದು ತಂದು ಸುಡುವ ಬೆಂಕಿಗೆ ಎಸೆಯುತ್ತಾಳೆ. ತಾನೂ ಅದರ ಜ್ವಾಲೆಗೆ ಹಾರಿ ಸತಿ ಹೋಗುತ್ತಾಳೆ.ಈಗ ಗಡಿಗೆ ಸುಟ್ಟು ಶುದ್ಧವಾಯಿತು. ಆಕೆಯೆ ಮಕ್ಕಳು ಮಾತ್ರ ತಪ್ಪಿಸಿಕೊಂಡು ಹೋಗಿ ಬದುಕುಳಿದರು. ಈ ಪರಂಪರೆಯೇ ಇಂದು ದೇವಿಯ ಭಕ್ತವರ್ಗವಾಗಿರುವ ಮಾದಿಗ ಪರಂಪರೆ ಎಂದು ಹೇಳಲಾಗುತ್ತದೆ.ಈ ಕತೆ ಸರ್ವತ್ರ ವ್ಯಾಪಕವಾಗಿರುವುದರಿಂದ ಇದರಲ್ಲಿ ಚಾರಿತ್ರಿಕಾಂಶವಿಲ್ಲವೆಂದು ನಿರಾಕರಿಸುವುದು ಸಾಹಸವಾದೀತು.


ಜನಜನಿತವಾದ ಈ ಕತೆಗೂ ಮಾರೆಮ್ಮ ಅಥವಾ ಮಾರಿಕಾಂಬೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಕತೆ ಕೇವಲ ಕೂತುಹಲಕ್ಕಾಗಿ ಅಲ್ಲ.ವಿಶ್ವ ಪ್ರಸಿದ್ಧ್ಹವಾದ ಶಿರಸಿ ಮಾರಿಕಾಂಬಾ ಜಾತ್ರೆಯು ಈ ಕತೆಯ ಒಂದು ಸಾಂಕೇತಿಕ ಪ್ರತಿಕ್ರಿಯೆ ಆಗಿದೆ. ಈ ಕತೆಯ ಭೂಮಿಕೆಯೇ ಜಾತ್ರೆಯ ವಿಧಿ ವಿಧಾನಗಳಾಗಿವೆ. ಹೊರಬೀಡು, ರಥ ತಯಾರಿಕೆ, ಅಂಕೆ ಹಾಕುವುದು, ಮೇಟಿದೀಪಹಿಡಿಯುವುದು ಈ ವಿಧಿಗಳೆಲ್ಲ ಮುಗಿದ ಮೇಲೆ ಲಗ್ನದಿಂದ ಜಾತ್ರೆಯ ಆರಂಭವಾಗುತ್ತದೆ. ಈ ದಿವಸ ದೇವಿಯ ಪ್ರತಿಷ್ಠೆಯಾಗಿ ಲಗ್ನದ ಕಾರ್ಯ ನಡೆಯುತ್ತದೆ. ನಾಡಿಗರು ಧಾರೆ ಎರೆದು ಕೊಡುತ್ತಾರೆ. ಲಗ್ನದ ಊಟವೂ ನಡೆಯುತ್ತದೆ.


ವಿವಾಹವಾದ ಬ್ರಾಹ್ಮಣಿಯನ್ನು ಗಂಡನ ಮನೆಗೆ ಕಳುಹಿಸುವ ಕಾರ್ಯವೇ ರಥೋತ್ಸವ. ಈ ಸಂದರ್ಭದಲ್ಲಿ ಕೋಣವನ್ನು ಬಲಿಯಾಗಿ ಅರ್ಪಿಸಲಾಗುತ್ತಿತ್ತು. ಹಿಂದೆ ಈ ರಕ್ತಬಲಿಯ ಪರಂಪರೆ ಭಯಾನಕವಾಗಿ ರೌದ್ರ ಭೀಕರವಾಗಿತ್ತು. ಸಾವಿರಾರು ಕೋಣಗಳನ್ನು ಕಡಿಯಲಾಗುತ್ತಿತ್ತು. ಅವುಗಳ ವಧೆಯಿಂದ ಭೀಭತ್ಸ್ಯ ವಾತಾವರಣವಾಗಿಬಿಡುತ್ತಿತ್ತು. ಆದರೆ ಬಹಿರಂಗವಾಗಿ ದೇವಸ್ಥಾನದ ಕಡೆಯಿಂದ ಇಂಥ ಹಿಂಸಾಬಲಿಯನ್ನು ಮೊತ್ತ ಮೊದಲು ನಿಲ್ಲಿಸಿದ ಕೀರ್ತಿಯೂ ಶಿರಸಿಗೇ ಸಲ್ಲುತ್ತದೆ. ಆನಂತರ ಸಾತ್ವಿಕ ಪೂಜಾ ವಿಧಿ ವಿಧಾನಗಳನ್ನೇ ಅಲವಡಿಸಿಕೊಳ್ಳಲಾಗಿದೆ. ಊರ ಗಡಿಯ ಭೂತಗಳಿಗೆ ಈಗ ಸಾಂಕೇತಿಕ ಬಲಿ ಅರ್ಪಿಸಲಾಗುವುದು. ಅನಂತರ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗುವರು. ಅಸಾದಿ ಜನಾಂಗದವರು ಭೂಮಿತಾಯಿಗೆ ಹೆಪ್ಪು ಸಮರ್ಪಿಸುವರು. ತಾಯಿಯ ವೈಧವ್ಯಕ್ಕಾಗಿ ವಿಲಾಪ ಮಾಡುತ್ತಾ ಇದಕ್ಕೆ ಕಾರಣರಾದವರನ್ನು ಶಪಿಸುತ್ತ ಅಸಾದಿಗಳು ದೇವಿಯನ್ನು ಹೊತ್ತುಕೊಂಡೊಯ್ಯುವರು. ಹನ್ನೆರಡು ದಿನದ ಅಶೌಚ ಮುಗಿದ ಮೇಲೆ ಪುನಃ ಗುಡಿಯಲ್ಲಿ ದೇವಿಯ ಸ್ಥಾಪನೆ. ಆಕೆ ಮತ್ತೆ ಬ್ರಾಹ್ಮಣನ ಮನೆಯಲ್ಲಿ ಕನ್ಯೆಯಾಗಿ ಜನಿಸಿದಳು ಎಂಬ ಅನುಸಂಧಾನ. ಈ ರೀತಿಯಾಗಿ ವಿಚಿತ್ರವಾದ ಮತ್ತು ವಿಶಿಷ್ಟವಾದ ಜಾತ್ರಾ ಮಹೋತ್ಸವ ಪರಂಪರೆ ಶಿರಸಿ ಮಾರಮ್ಮನ ವೈಶಿಷ್ಟ್ಯವೆನ್ನಬೇಕು. ಸಂಹಾರದ ಗರ್ಭದಲ್ಲಿಯೇ ಸೃಷ್ಟಿ ಅಡಗಿದೆ ಎನ್ನುವ ಪರಮಾರ್ಥವನ್ನು ಸಂಕೇತಿಸುವದು ಈ ಜಾತ್ರಾ ಉತ್ಸವ.


(ಇನ್ನಷ್ಟು ಕುತೂಹಲಕರ ವಿಷಯ ವಿವರ ಮುಂದಿನ ಭಾಗದಲ್ಲಿ)


- ಮಹೇಂದ್ರ_ಸಂಕಿಮನೆ

19 views0 comments

Recent Posts

See All

ಈ ವರ್ಷ...

ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ...

ಏನೋ ಒಂಥರಾ....

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು...

Comments


Post: Blog2_Post
bottom of page