#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__3
ಮಾರಿಕಾಂಬೆಯ ಮಹಿಮೆ : ಕಣ್ಣು ತೆರೆದಳು ದೇವಿ..
ಶಕ್ತಿ ಪೀಠವೆಂದ ಮೇಲೆ ಜನರಿಗೆಲ್ಲ ಒಂದು ರೀತಿಯ ಕುತೂಹಲ ಕೌತುಕ ಇರುತ್ತದೆ. ಹೇಗೆ ಭಕ್ತರಿಗೆ ಸ್ಪಂದಿಸುವಳು ಎಂದು..? ಅನೇಕ ಸೋಜಿಗ ಪವಾಡಗಳೂ ಕೂಡ ಘಟಿಸಿರುತ್ತವಾದರೂ, ಕೆಲವನ್ನು ಉಲ್ಲೇಖಿಸಬಹುದು.
ಶ್ರೀ ಮಾರಿಕಾಂಬೆ ತನ್ನ ಭಕ್ತ ಜನರನ್ನುಹೇಗೆ ಸಲಹುತ್ತಾಳೆಂಬುದಕ್ಕೆ ಒಂದು ಸಂಗತಿ. ಬ್ರಿಟೀಷ್ ಆಡಳಿತದ ಆವರಿಸಿದ ಸಮಯ. ಪರಂಗಿ ಸೈನ್ಯ ಸೀಮೆಯನ್ನು ವಶಪಡಿಸಿಕೊಳ್ಳುತ್ತಿದ್ದ ಕಾಲವದು. ಆ ವರ್ಷವೂ ಸಹ ಜಾತ್ರೆ ಆರಂಭವಾಯಿತು. ಜಾತ್ರಾ ವಿಧಿ ವಿಧಾನ ಕೈಂಕರ್ಯಗಳು ನೆರವೇರಿ ಶ್ರೀ ಮಾರಿಕಾಂಬೆ ಬಿಡಕಿ ಬಯಲಿನ ಗದ್ದುಗೆಯ ಮೇಲೆ ಪ್ರತಿಷ್ಠಾಪಿತಳಾಗಿದ್ದಳು ವಾಡಿಕೆಯಂತೆ ಹಣ್ಣು ಕಾಯಿ ಸಮರ್ಪಣೆ ಸೇವೆ ನಡೆದಿದ್ದವು. ಜಾತ್ರಾ ಸಮಯದಲ್ಲಿ ಶ್ರೀದೇವಿಯ ಎದುರು ಅರ್ಚಕರು ಕಾಯಿ ಒಡೆಯದೆ ದೇವಸ್ಥಾನದ ರೈತ ವರ್ಗವೇ ಕಾಯಿ ಒಡೆಯುವದು ರೂಢಿ. ಅದರಂತೇಯೇ ಆಗ ರೈತರು ಕಾಯಿ ಒಡೆಯುತ್ತಿರುವಾಗಲೇ ಸೈನ್ಯದವರು ಬಂದು ತಾವೇ ಕಾಯಿ ಒಡೆದುಕೊಳ್ಳುತ್ತೇವೆಂದರು. ಆಗ ರೈತರು ನಿರಾಕರಿಸಿದರು. ಅದಕ್ಕಾಗಿ ಸೈನಿಕರು ರೈತರನ್ನು ಬೆತ್ತದಿಂದ ಥಳಿಸತೊಡಗಿದರು. ಆಡಳಿತ ಮಂಡಳಿ ಪ್ರಮುಖರಾದ ಮೋಕ್ತೇಸರರ ಬಳಿ ದೂರು ಹೋಯಿತು. ಸೇನೆಯ ಎದುರು ಯಾರ ಆಟವೂ ನಡೆಯುವಂತಿರಲಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಯಿತು. ಬೆತ್ತದೇಟಿಗೆ ರೈತರು ತತ್ತರಿಸಿದರು. ದಂಡಿನವರ ದರ್ಪ ದೌರ್ಜನ್ಯ ನೋಡಲಾಗದೇ ಆಗಿನ ಧರ್ಮ ದರ್ಶಿಗಳಾದ ಶ್ರೀ ಶೇಷಯ್ಯ ನಾಡಿಗ ಅವರು ಅರಿಷಿನ ಕುಂಕುಮವನ್ನು ದೇವಿಯ ಮುಖಕ್ಕೆ ಎರಚಿ ’ ತಾಯೀ, ನಿನ್ನ ದಾಸರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನೋಡಿಯೂ ಕಣ್ತೆರೆಯುತ್ತಿಲ್ಲವಲ್ಲ ನೀನು.. ನಿನ್ನಲ್ಲಿ ಏನಾದರೂ ಶಕ್ತಿ ಸಾಮರ್ಥ್ಯ ಇದ್ದರೆ ನಿನ್ನ ಭಕ್ತ ಜನರಿಗೆ ದಾರಿ ತೋರು’ ಎಂದು ಬೇಡಿಕೊಂಡರು. ಕೂಡಲೇ ಸೈನಿಕರ ಮೈಯೆಲ್ಲ ಉರಿ ದಾಹ ಉಂಟಾಯಿತು. ಸೈನಿಕರಿಗೆ ಏನು ಮಾಡಬೇಕೆಂಬುದೇ ತೋಚದಾಯಿತು. ಅತ್ತ ಸೈನಿಕರು ತಂಗಿದ್ದ ಕ್ಯಾಂಪಿಗೂ ಬೆಂಕಿ ಬಿದ್ದು, ಒಮ್ಮೆಲೆ ಹಾಹಾಕಾರವೆದ್ದಿತು. ಇದರಿಂದ ಅಪಾರ ನಷ್ಟ ಸಂಭವಿಸಲು, ಸೈನ್ಯದ ಮುಖ್ಯಾಧಿಕಾರಿಗಳು ಬಂದು ದೇವಿಯ ಸನ್ನಿಧಿಯಲ್ಲಿ ಶರಣಾಗತರಾಗಿ ತಮ್ಮನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿಕೊಂಡರು. ಸೈನಿಕರ ಉರಿ ದಾಹವು ಕಡಿಮೆಯಾಯಿತು. ಎದುರಾದ ಆತಂಕ ನಿವಾರಣೆ ಆಯಿತು. ಈಗಲೂ ನಾಡಿಗ ಮನೆತನದವರಿಂದ ಶ್ರೀ ದೇವಿಯ ಪ್ರತಿಷ್ಠೆ ಪೂಜೆ ನಡೆಯುತ್ತದೆ. ಜಾತ್ರೆ ಯ ಸಮಯದಲ್ಲಿ ನಾಡಿಗರು ಶ್ರೀ ದೇವಿಯನ್ನು ತಮ್ಮ ಮಗಳಂತೆ ಭಾವಿಸಿ ತವರಿನಜಗಲ್ಲಿ ನಿಂತು ಹೋಳಿಗೆ ಊಟ ಹಾಕಿಸಿ ಮಗಳ ಲಗ್ನ ಮಾಡಿ ತಾಳಿ ಕಟ್ಟುವ ಉತ್ಸವ ರಮ್ಯವಾಗಿರುತ್ತದೆ.
ಮಾರಿಯ ಮಾಯೆ
ದೇವಿಯ ಪವಾಡವನ್ನು ಪುಷ್ಟೀಕರಿಸುವ ಮಹಿಮೆಯನ್ನು ವಿಶದೀಕರಿಸುವ ಇನ್ನೊಂದು ನಿದರ್ಶನ ಇಂತಿದೆ.
ಕ್ರಿ.ಶ. ೧೯೦೫ ರಲ್ಲಿ ಶಿರಸಿ ಊರಲ್ಲೆಲ್ಲ ಮೈಲಿ ಬೇನೆ ತೀವ್ರವಾಗಿ ಕಾಡುತ್ತಿತ್ತು. ಆಗಿನ ಜಿಲ್ಲಾಧಿಕಾರಿಯಾದ ಡಿಮೆಲ್ಲೋ , ಮೈಲಿಯ ಇರುವ ಕಾರಣಕ್ಕೆ ಜಾತ್ರೆ ನಡೆಯಕೂಡದೆಂದು ನಿರ್ಧಾರ ಮಾಡಿದರು. ಮಾರಮ್ಮನೆಂದರೆ ಜನರ ಮನಸ್ಸಿನಲ್ಲಿ ಮೈಲಿ ಮುಂತಾದ ಬೇನೆಗಳನ್ನು ಓಡಿಸುವವಳು ಎಂಬ ಭಾವನೆ. ಹಾಗಾಗಿ ಮೈಲಿ ಬಂದರೆ ಅಮ್ಮ ಬರುವುದು ಎಂದೂ ಹೇಳುವರು. ಅಂತಹವಳ ಉತ್ಸವವನ್ನೆ ನಿಲ್ಲಿಸುವುದು ಎಂದರೇನು ? ಜನರಿಗೆಲ್ಲ ಇದು ಸರಿ ಕಾಣಲಿಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಎನ್ನುವಂತೆ ಜಿಲ್ಲಾಧಿಕಾರಿಯ ಬಳಿ ಹೇಳುವ ಧೈರ್ಯ ಆಗಲಿಲ್ಲ. ಮೇಲಾಗಿ ಜಿಲ್ಲಾಧಿಕಾರಿಗಳು ಜಾತ್ರೆಗೆ ಹೆಚ್ಚು ಜನ ಸೇರಬಾರದೆಂದು ಆದೇಶ ನೀಡಿದ್ದಲ್ಲದೇ, ಖುದ್ದಾಗಿ ಜಾತ್ರೆ ಸ್ಥಳದಲ್ಲಿ ಠಿಕಾಣಿ ಹೂಡಿ ಕುಳಿತುಬಿಟ್ಟರು. ಜಿಲ್ಲಾಧಿಕಾರಿಯ ಆದೇಶ ಇದ್ದುದರಿಂದ ಜನರು ಹೆಚ್ಚು ಸೇರಲಿಲ್ಲ.ಅತ್ಯಲ್ಪ ಜನರೊಡನೆ ಗದ್ದಲವಿಲ್ಲದೇ ದೇವಿಯ ರಥೋತ್ಸವ ಸಾಗಿತು. ಗದ್ದುಗೆಯ ಮೇಲೆ ದೇವಿಯ ಪ್ರತಿಷ್ಠೆಯಾಗಿ ಭಕ್ತರು ಬಂದು ತಮ್ಮ ಪಾಲಿನ ಸೇವೆ ಸಮರ್ಪಿಸಿದರು. ಎಲ್ಲ ಕಾರ್ಯಗಳು ಮುಗಿಯುತ್ತಿದ್ದಂತೆ ಜಿಲ್ಲಧಿಕಾರಿಗೆ ತಾರು( ತಂತಿ ಸಂದೇಶ ) ಬಂತು. ಅವರ ಊರಿನಿಂದ ಬಂದ ಸಂದೇಶದಲ್ಲಿ ’ ನಿಮ್ಮ ಮಗಳಿಗೆ ಮೈಲಿ ಆಗಿದೆ’ ಎಂದು ಇತ್ತು. ಜಿಲ್ಲಾಧಿಕಾರಿ ಚಕಿತರಾದರು. ಏಕೆಂದರೆ ತನ್ನ ಊರಿನಲ್ಲಿ ಮೈಲಿ ಬೇನೆ ಬಂದ ಓಂದೇ ಒಂದು ಉದಾಹರಣೆ ಇಲ್ಲ. ಈಗ ಒಮ್ಮೆಲೆ ಕಾಣಿಸಿಕೊಳ್ಳುವುದು ಹೇಗೆ ಸಾಧ್ಯ? ಮರುಕ್ಷಣವೇ ಹೊಳೆಯಿತು. ಇದಕ್ಕೆಲ್ಲ ದೇವಿಯ ಕೋಪವೇ ಕಾರಣ ಎಂದು ತಿಳಿದರು. ಮಾರಿಕಾಂಬೆಯಲ್ಲಿ , ತನ್ನ ಮನೆದೀಪವನ್ನು ಉಳಿಸು , ಹರಕೆಯಾಗಿ ನಿನ್ನೆತ್ತರದ ದೀಪವನ್ನು ಅರ್ಪಿಸುವೆನೆಂದು ನಿವೇದಿಸಿಕೊಂಡರು. ನಂತರ ಯುಗಾದಿಯ ದಿನ ದೇವಿಯ ಪುನರ್ ಪ್ರತಿಷ್ಠೆಯ ಸಮಯಕ್ಕೆ ಐದು ಅಡಿ ಎತ್ತರದ ನಂದಾದೀಪವನ್ನು ಒಪ್ಪಿಸಿದರು. ಮಗಳಿಗೆ ಮೈಲಿ ಕಡಿಮೆಯಾದ ಮಾಹಿತಿ ಆಮೇಲೆ ಬಂತು. ಮಗು ಬದುಕಿ ಮನೆ ಮನ ಬೆಳಗಿತು. ಇಂತಹ ವಿಸ್ಮಯಗಳು ಭಾವುಕರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಮಾರಿಕಾಂಬಾ ಪೀಠ ಶಕ್ತಿ ಪೀಠವೆಂಬುದನ್ನು ಪುಷ್ಟೀಕರಿಸುತ್ತದೆ.
(ಮತ್ತಷ್ಟು ವಿಷಯ ಮುಂದಿನ ಭಾಗದಲ್ಲಿ)
-ಮಹೇಂದ್ರ_ಸಂಕಿಮನೆ
Comments