top of page
Writer's pictureಮಹೇಂದ್ರ ಸಂಕಿಮನೆ

ಶಿರಸಿಯ_ಸಿರಿದೇವಿ_ಶ್ರೀ_ಮಾರಿಕಾಂಬೆ

#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__2



ಈ ಮಾರೆಮ್ಮ ಶಿರಸಿಗೆ ಬಂದದ್ದು ಹೇಗೆ..?

ಇಲ್ಲಿ ನೆಲೆಯಾದದ್ದು ಹೇಗೆ..?

ಇವಳ ಹಿನ್ನೆಲೆ, ಪೂರ್ವಾಶ್ರಮವೇನು..?


ಮಾರಿಕಾಂಬಾ ದೇವಿ ನಾಡಿನ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ದೊಡ್ಡಮ್ಮ ಅಂದರೆ ಎಲ್ಲ ಮಾರಿಯಮ್ಮಂದಿರ ಅಕ್ಕ ಎಂದೂ ಕರೆಸಿಕೊಂಡಿರುವವಳು. ಜನಜನಿತ ಕಥೆಯಲ್ಲದೆ ಮಾರಿಕಾಂಬೆಗೆ ಒಂದು ಚರಿತೆಯೇ ಉಂಟು.


ಶಿರಸಿಗೆ ಬರುವ ಮೊದಲು ಮಾರಿಕಾಂಬೆ ನೆಲೆಸಿದ ಪೀಠವು ಮಹಿಮಾಯುತವಾದದ್ದು. ಈ ವಿಗ್ರಹವನ್ನು ಹಾನಗಲ್ಲಿನಿಂದ ತರಲಾಯಿತೆನ್ನಲಾಗಿದೆ. ಹಾನಗಲ್ಲಿನಲ್ಲಿ ಇಂತಹ ಪ್ರಾಚೀನ ಶಕ್ತಿ ಪೀಠವಿದ್ದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ ಬರುತ್ತದೆ. ಅಲ್ಲದೇ ಅಜ್ಞಾತ ವಾಸದಲ್ಲಿದ್ದ ಧರ್ಮ ರಾಜನು ವಿರಾಟ ನಗರಕ್ಕೆ ಬಂದು ಊರಿನ ಪ್ರಾರಂಭದಲ್ಲಿಯೇ ಇರುವ ದುರ್ಗೆಯನ್ನು ತನ್ನ ರಕ್ಷಣೆಗಾಗಿ ಬೇಡಿಕೊಳ್ಳುತ್ತಾನೆ.


ವಿರಾಟ ನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ| ಅಸ್ತುವನ್ ಮನಸಾ ದೇವೀಂ ದುರ್ಗೀಂ ತ್ರಿಭುವನೇಶ್ವರೀಂ||

ಎಂದು ಹೇಳುತ್ತಾ ಕೊನೆಗೆ,


ತ್ರೈಲೋಕ್ಯ ರಕ್ಷಣಾರ್ಥಾಯ ಮಹಿಷಾಸುರ ನಾಶಿನಿ| ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂಕುರು ಶಿವಾ ಭವ||


ಅಂದಿನ ವಿರಾಟ ನಗರವೇ ಈಗಿನ ಹಾನಗಲ್ಲು. ಚಾಲುಕ್ಯನ ಶಾಸನಗಳಲ್ಲಿಯೂ ಇದು ’ವಿರಾಟನ ಕೋಂಟೆ’ ಎಂದಿದೆ. ಮಹಾಭಾರತ ಕಾಲದ ವಿರಾಟ ನಗರವು ಇದೇ ಎಂದು ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆ ಹೇಳಿದೆ. ಇಂದು ಹಾನಗಲ್ಲಿನಲ್ಲಿ ’ಕುಂತಿ ದಿಬ್ಬ’ ಎಂದು ಹೇಳಲಾಗುವ ಸ್ಥಳವೇ ಶ್ರೀದೇವಿ ಕುಳಿತುಕೊಂಡ ತ್ರಿಭುವನೇಶ್ವರಿ ಪೀಠವಾಗಿತ್ತೆಂದು ಹೇಳಲಾಗಿದೆ.


ಕಾಲಾನಂತರ ಇಡೀ ದೇಶ ಮೊಗಲರ ದಾಳಿಗೆ ಈಡಾಯಿತು. ಕರ್ನಾಟಕವೂ ಇದರಿಂದ ಹೊರತಾಗಲಿಲ್ಲ. ವಿಜಯನಗರ ಅರಸರ ಕಾಲದಲ್ಲಾದ ಮೊಗಲರ ದಾಳಿ ಮರೆಯಲಾಗದಂತಹದ್ದು. ಈ ಕುರಿತು ಬ್ರಿಟಿಷ್ ಅಧಿಕಾರಿ 'ಕರ್ನಲನಾದ ಮೆಕೆಂಜಿಯು' ಕೈಫಿಯತ್ತನ್ನು ಬರೆದಿದ್ದಾನೆ. ಅದರಲ್ಲಿ ಮೊಗಲರ ದಂಡು ಹಾನಗಲ್ ಬಂಕಾಪುರ ಕಿಲ್ಲೆಗೆ ಮುತ್ತಿಗೆ ಹಾಕಿ ಯುದ್ಧ ಮಾಡಿತು. ಅಲ್ಲದೇ ಅಲ್ಲೇ ಠಿಕಾಣಿ ಹೂಡಿತು.ಅನಂತರ ಕಿಲ್ಲೇದ ಗುಳ್ಯಾದಲ್ಲಿದ್ದ ಜನರಿಗೆಲ್ಲಾ ನಿಮ್ಮ ನಿಮ್ಮ ವಸ್ತು ಒಡವೆಗಳನ್ನು ಕಟ್ಟಿಕೊಂಡು ಇಲ್ಲಿಂದ ಗಡಿದಾಟಿ ಹೋಗಬೇಕೆಂದು ಆಜ್ಞೆ ಮಾಡಿದರು. ಆಗ ಗುಳ್ಯಾದಲ್ಲಿದ್ದ ಜನರಿಗೆಲ್ಲಾ ಅಲ್ಲಿಂದ ಓಡುವುದು ಅನಿವಾರ್ಯವಾಯಿತು. ಈ ಸಮಯದಲ್ಲಿ ದೇವಿಯನ್ನು ಪೆಟ್ಟಿಗೆಯಲ್ಲಿರಿಸಿ ಅರಗಿನ ಮುದ್ರೆಯನ್ನು ಹಾಕಲಾಗಿತ್ತು. ಈ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದು ಶಿರಸಿಯ ಕೋಟೆಕೆರೆ ಸಮೀಪದಲ್ಲಿರುವ ಗುಡ್ದದಲ್ಲಿ ಇಳಿದುಕೊಂಡರು ಎನ್ನಲಾಗಿದೆ.


ದೇವಸ್ಥಾನದ ಹಳೆಯ ದಾಖಲೆಯಲ್ಲಿ ’ಬಸವನು ಪಡಲಿಗೆ (ಬಿದಿರು ಬುಟ್ಟಿ) ಹೊತ್ತು ತಿರುಗುವ ಗುತ್ತಿ ಸೀಮೆಯವರು ಆತಂಕ ಪಡಿಸಿದರು. ಅದೇ ಕಾಲಕ್ಕೆ ಊರಕೆರೆಯಲ್ಲಿ ದೇವಿಯ ವಿಗ್ರಹ ಸಿಕ್ಕಿತೆಂದು ಅದನ್ನು ಇಲ್ಲಿ ಗ್ರಾಮದೇವತೆಯಾಗಿ ಪ್ರತಿಷ್ಠಾಪಿಸುವ ಕುರಿತು ನಂದಿಕೇಶ್ವರ ಮಠದ ಸ್ವಾಮಿಗಳ ಮುಖಾಂತರ ಸೋದೆಯ ಇಮ್ಮಡಿ ಸದಾಶಿವ ರಾಯರಲ್ಲಿ ಗ್ರಾಮದ ಸಮಸ್ತರು ಸೇರಿ ವಿನಂತಿಸಿ ಕೊಳ್ಳಲು ಶಿರಸಿಯಲ್ಲಿ ನಾಗರಗುತ್ತಿ ಸ್ಥಳ ದುರ್ಗಿ ಸ್ಮಶಾನದ ಭಾಗದಲ್ಲಿ ಪ್ರತಿಷ್ಟೆ ಮಾಡಿಸಲು ದೈವ ದವರಿಗೆ ಅಪ್ಪಣೆ ದೊರಕಿತು...’ ಇತ್ಯಾದಿ ಹೇಳಿಕೆಯಿದೆ.


ಒಟ್ಟಿನಲ್ಲಿ ಹೊರಗಿನಿಂದ ಬಂದ ಗಾಳಿಮಾರಿ ಶಿರಸಿಯಲ್ಲಿ ಮಾರೆಮ್ಮನಾಗಿ ಕ್ರಿ.ಶ. ೧೬೧೧, ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿ ಮಂಗಳವಾರದಂದು ದೇವಿಯಾಗಿ ಪ್ರತಿಷ್ಟಿತಳಾದಳು. ಆಗ ಪುಟ್ಟದಾದ ಬಿಡಾರವಾಗಿದ್ದು ಎದುರು ಭಾಗದಲ್ಲಿ ಎತ್ತರವಾದ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅಡಿಕೆ ಸೋಗೆಯಿಂದ ಛಾವಣಿ ಹಾಕಲ್ಪಟ್ಟಿತ್ತು. ಒಮ್ಮೆ ಕಾರ್ತೀಕ ಮಾಸದ ದೀಪೋತ್ಸವದಲ್ಲಿ ಹಾರಿಸಿದ ಗರ್ನಾಲು ದೇವಾಲಯದ ಮೇಲೆ ಬಿದ್ದು ಒಳಗಿರುವ ಮದ್ದಿನ ಸಂಗ್ರಹಕ್ಕೂ ಹಿಡಿಯಿತು. ಕೆಲವೇ ಸಮಯದಲ್ಲಿ ಅಕಲ್ಪಿತವಾದ ಘಟನೆ ನಡೆದು ಹೋಗಿ ಮುಂಭಾಗದ ಛಾವಣಿ ಸುಟ್ಟು ಭಸ್ಮವಾಯಿತು.


ದೇವಾಲಯ ನಿರ್ಮಾಣ..

ಇಷ್ಟಾದರೂ ಒಮ್ಮೆಲೇ ದೇವಾಲಯದ ನಿರ್ಮಾಣವಾಗಲಿಲ್ಲ. ಶತಮಾನದಷ್ಟು ದೀರ್ಘಕಾಲವೇ ಬೇಕಾಯಿತು. ಹೆಸರಿಗೊಬ್ಬ ಊರ ಹಿರಿಯರು ಆಡಳಿತ ವಹಿವಾಟು ನೋಡಿಕೊಳ್ಳುತ್ತಿದ್ದರು. ದೇವಾಲಯಕ್ಕೆ ಹತ್ತಿರವಾಗಿದ್ದ ಶಿರಸಿಯ ಪ್ರಸಿದ್ಧ ಮನೆತನದ ಧಾಕಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಗರ್ಭಗುಡಿ, ಶಿಖರ, ರಂಗಮಂಟಪ ಹಾಗೂ ಚಂದ್ರಶಾಲೆಯನ್ನು ದೇವಿಯ ನಿಧಿಯಿಂದ ಕಟ್ಟಿಸಿದರು. ಇದು ಕ್ರಿ ಶ. ೧೭೯೦ರಲ್ಲಿ. ಅನಂತರ ದೇವಸ್ಥನದ ಎರಡನೆಯ ಪ್ರಸಿದ್ಧ ಧರ್ಮದರ್ಶಿಗಳು ಇಸಳೂರು ಮನೆತನದವರು. ಶ್ರೀ ರಾಮಚಂದ್ರರಾವ್ ಇಸಳೂರು ಅವರು ಇಂದು ಕಾಣುವ ನವಾಗಾರ ಖಾನೆಯ ನಿರ್ಮಾಣ ಮಾಡಿದರು. ಈ ಬಗ್ಗೆ ಘಟ್ಟದ ಕೆಳಗೆ ಸಹ ದೇಣಿಗೆ ಬಗ್ಗೆ ವಿನಂತಿ ಪತ್ರ ಹೋಯಿತು. ಸಾವಂತವಾಡಿ ಹತ್ತಿರದ ರೇಡಕರ ಎಂಬ ಗಾವಂಡಿಗಳು ಇಂದಿನ ರಾಜ ಭವನದಂತಹ ನಾಗರಖಾನೆಯನ್ನು ಕಟ್ಟಿಸಿದರು. ಘಟ್ಟದ ಕೆಳಗಿನಿಂದ ನೂರಾರು ಬಂಡಿಗಳು ಕಾಣಿಕೆಯನ್ನು ಹೇರಿಕೊಂಡು ಬಂದವು. ಸುಮಾರು ೫೦-೬೦ ಸಾವಿರದಷ್ಟು ಬೆಳ್ಳಿಯ ರೂಪಾಯಿಗಳು ಬಂದಿರಬಹುದೆಂದು ಅಂದಾಜಿಸಲಾಗಿದೆ. ೧೮೭೩ ರಲ್ಲಿ ನವಾಗಾರ ಖಾನೆ ಸಿದ್ಧವಾಗಿ ವೈಭವದಿಂದ ಜಾತ್ರ ಉತ್ಸವ ಜರುಗಿತು. ಮುಂದೆ ವಿಠಲರಾವ ಇಸ್ಲೂರರ ಕಾಲದಲ್ಲಿ ದೇವರ ಖ್ಯಾತಿಗೆ ತಕ್ಕದಾದ ಕಿರೀಟವನ್ನು ಬಂಗಾರದಿಂದ ತಯಾರಿಸಿ ಅದಕ್ಕೆ ಉತ್ತಮವಾದ ಹರಳು ಕಲ್ಲುಗಳನ್ನು ಸೇರಿಸಲಾಯಿತು. ಇದೊಂದು ಆ ಕಾಲದ ಚಿರಸ್ಮರಣೀಯ ಸಂಗತಿ. ಇಂದೂ ಸಹ ಇಷ್ಟು ದೊಡ್ಡದಾದ ಕಿರೀಟ ಸುತ್ತಲ ಸೀಮೆಯಲ್ಲಿ ಎಲ್ಲಿಯೂ ಇಲ್ಲ ಎನ್ನಬಹುದು. ಶಿರಸಿಯ ಸುಪ್ರಸಿದ್ಧ ಕಲಾವಿದರು ತಮ್ಮ ಹೆಸರನ್ನು ಶಾಶ್ವತವಾಗಿ ಇರುವಂತೆ ಶ್ರಮಿಸಿದ ಸುವರ್ಣ ಕಿರೀಟ. ಇದನ್ನು ಶಿರಸಿಯ ಪ್ರಸಿದ್ಧ ಕಲಾವಿದರಾದ ಶ್ರೀ ಗುರುರಾಯ ರಾಯ್ಕರ ಇವರು ತಯಾರಿಸಿದರು. ಇದು ಕ್ರಿ.ಶ ೧೯೨೫ರಲ್ಲಿ.

ದಿನದಿಂದ ದಿನಕ್ಕೆ ಶಿರಸಿ ಮಾರಿಕಾಂಬೆಯ ಪ್ರಸಿದ್ಧಿ ಹೆಚ್ಚತೊಡಗಿತು. ಈ ಭಾಗದಲ್ಲಿ ಮೊದಲೇ ಚಂದ್ರಗುತ್ತಿಯ ರೇಣುಕಾಂಬೆ, ಪ್ರಸಿದ್ಧಳಾಗಿದ್ದಳು. ದಕ್ಷಿಣ ಕನ್ನಡದಲ್ಲಿ ಕೊಲ್ಲೂರಿನ ಮೂಕಾಂಬೆ, ಶೃಂಗೇರಿಯ ಶಾರದಾಂಬೆ, ಗೋಕರ್ಣದ ಭದ್ರಕಾಳಿ ಮೊದಲಾದ ಶಕ್ತಿಪೀಠಗಳು ಪ್ರಸಿದ್ಧವಾಗಿದ್ದವು. ಅದರಂತೆಯೇ ಶಿರಸಿಯ ಜನರೂ ತನಗಾಗಿ ಒಂದೊಂದು ಸಮಾಜವೂ ತನ್ನದೇ ಆದ ಪ್ರತ್ಯೇಕ ದೇವಾಲಯ ಕಟ್ಟಿಕೊಂಡಿದ್ದರೂ ಮಾರಿಕಾಂಬೆಯನ್ನು ಮರೆಯಲಿಲ್ಲ. ಮಾತೆಯ ಸ್ಪುರದ್ರೂಪಕ್ಕೆ ಮಾರುಹೋದಜನ ನಮ್ಮೂರಿಗೆ ಇನ್ನು ದೈವ ಕೃಪೆ ಆಯಿತೆಂದೇ ಭಾವಿಸಿದರು.

ಮಲೆನಾಡಿನ ಸೆರಗಿನಲ್ಲಿರುವ ಶಿರಸಿ ಸಂಪದ್ಭರಿತ ಸುಪ್ಪತ್ತಿಗೆಯಲ್ಲಿರುವ ನಗರ. ಇಲ್ಲಿಯ ಸ್ವರ್ಗ ಸದೃಶ ಬದುಕಿಗೆ ಮಾರಿಕಾಂಬೆಯ ಸಾನ್ನಿಧ್ಯವೂ ಕಾರಣವಾಗಿದೆ.


ದೇವಿಯ ದಿವ್ಯತೆ..


ಶ್ರೀ ಮಾರಿಕಾಂಬೆ ಆಗಮೋಕ್ತ ದೇವಿಯಲ್ಲ. ಶಿಲಾ ವಿಗ್ರಹವಲ್ಲ. ಮೃಣ್ಮಯ/ಮಣ್ಣಿನ ಮೂರ್ತಿಯೂ ಅಲ್ಲ. ರಕ್ತ ಚಂದನದ ಕಟ್ಟಿಗೆಯಿಂದ ಕಡೆದ ಅಷ್ಟಭುಜವುಳ್ಳ ಆರು ಅಡಿ ಎತ್ತರದ ಕಲಾಪೂರ್ಣ ಕಾಷ್ಠ ವಿಗ್ರಹವಾಗಿದೆ. ಕೆಂಪು ಮೈ ಬಣ್ಣ, ತೇಜಃಪುಂಜವಾದ ಮುಖಾರವಿಂದ ಮುಖದಲ್ಲಿ ಮೂಡಿದ ಅಂದವಾದ ಮಂದಹಾಸ. ಪ್ರಭಾವೀ ಕಣ್ಣುಗಳು ದರ್ಶನ ಮಾಡಿದವರಲ್ಲಿ ಧನ್ಯತೆಯನ್ನುಂಟುಮಾಡುವುವು.


ಶಕ್ತಿ ವಿಗ್ರಹಗಳಲ್ಲಿ ಇರಬೇಕಾದ ಸಕಲ ಗುಣವೂ ಶ್ರೀ ದೇವಿಯಲ್ಲಿ ಸಂಪೂರ್ಣವಾಗಿ ಸಮ್ಮಿಳಿತವಾಗಿದೆ. ಶಕ್ತಿ ವಿಗ್ರಹಗಳ ಹಸ್ತದಲ್ಲಿರುವ ಎಲ್ಲ ಆಯುಧಗಳಿಂದಲೂ ದೇವಿ ಭೂಷಿತಳಾಗಿದ್ದಾಳೆ. ವಿಶೇಷವೆಂದರೆ, ಇತರ ಶಕ್ತಿ ವಿಗ್ರಹಗಳಲ್ಲಿ ಕಾಣದೇ ಇರಬಹುದಾದ ಬಲಮುರಿ ಶಂಖವೇ ಶಿರಸಿಯ ವೈಭವಕ್ಕೂ ಸಂಪನ್ಮೂಲಕ್ಕೂ ಕಾರಣವೆಂದು ಭಾವುಕರ ನಂಬಿಕೆ.


(ಇನ್ನಷ್ಟು ಕುತೂಹಲಕರ ವಿಷಯ ವಿವರ ಮುಂದಿನ ಭಾಗದಲ್ಲಿ)


-ಮಹೇಂದ್ರಸಂಕಿಮನೆ



53 views0 comments

Recent Posts

See All

ಈ ವರ್ಷ...

ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ...

ಏನೋ ಒಂಥರಾ....

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು...

Comments


Post: Blog2_Post
bottom of page