ಚಂದ್ರನನ್ನು ಹುಡುಕುತ್ತಾ ಹೊರಟಿದ್ದ ಸಮಯ.
ಸಂಜೆ ಆಗಿತ್ತು. ಬಾನ ಬಣ್ಣಕೆ ಆ ಸೂರ್ಯ ಅಂದುಕೊಂಡಂತೆ ಬಳಿಯಲಾಗದೇ ಹೋದ. ಉಳಿದವೆಲ್ಲ ಹರಡಿ ಚಂದವಾಗಿತ್ತು. ಅದಕರದೇ ಹದ.
(ಛಾಯೆ: ವಿನಯ ಮಿಳ್ಗಾರ)
ಸಂಜೆಗೆ ಮೊದಲ ಚಂದಿರನ ಬಳಿ ನಕ್ಷತ್ರ ಬರುವುದೆಂದು ಖಾಸಾ ದೋಸ್ತ ಹೇಳಿದ್ದ . ಚಂದ್ರರೇಖೆಯು ಸುತ್ತ ಮುತ್ತ ಕಟ್ಟುವದೆಂದು ಆ ವಿಸ್ಮಯ ನೋಡಲೇ ನಾ ಹೊರಟಿದ್ದು.
ನೀ ಕಾಣದಿದ್ದರೆ ಚಂದ್ರ ಸಿಗುತ್ತಿದ್ದ.
ನೀ ಕಂಡ ಬಳಿಕ ಆ ಚಂದ್ರ ನಿತ್ಯ ಸಿಗುತ್ತಾನೆಂಬ ಉದಾಸ ಭಾವ ಬಂದುಬಿಡಲು ತಡವಾಗಲಿಲ್ಲ.
ಚಂದ್ರ ಚುಕ್ಕೆಗಳ ಬಳಿಸಿ ಬಾನ ಕರಿ ಬಣ್ಣ ಅಳಿಸಿದಂತಹ ನಿನ ನಗುವಿನ ರಂಗೋಲಿ ಬಿತ್ತು. ಮೋಹಕ ನಗು, ಮಿನುಗುವ ಕಣ್ಣು, ಲುಬ್ಧಕ ತಾರೆಗಿಂತ ಕೊಂಚ ಮಿಗಿಲಾಗಿಯೇ ಮಿಂಚಿತ್ತು. ಒಲವೆಂಬ ಚಿಗುರುಗುಟ್ಟ ಹುಗಿದು ನೀ ಹೋದೆ. ಮಿದುವಾದ ಎದೆನೆಲದಲ್ಲಿ ಅದು ನೆಟ್ಟಿತು. ಭದ್ರವಾಗೇ ನೆಟ್ಟಿತು.
ಈ ಚಂದ್ರನಿಗೆ ಸುಟ್ಟ ಹೊಟ್ಟೆ ಕಿಚ್ಚು. ಮೇಲಿದ್ದು ಹೀಗೆ ಉಸ್ತುವಾರಿ ನೋಡುವರ ಕಥೆಯೆ ಅಷ್ಟರದು ಎನಿಸುತ್ತದೆ. ಮೇಲಿದ್ದೆಲ್ಲಾ ನೋಡುತ್ತಾನೆ. ಕೋಟಿ ಜನರಿದ್ದೂ ಸಹ ಆಸ್ಥೆಯಿಂಬ ನೋಡಬರುವ ಒಬ್ಬನೂ ಬರದೇ ಹೋದನೆಂಬ ಕಾರಣಕ್ಕೆ; ಅಂದು ರೋಹಿಣಿ ನಕ್ಷತ್ರದ ಬಳಿಯೂ ಆತ ಹೋಗಲಿಲ್ಲವಂತೆ. ಉಳಿದವು ಸದ್ಯ ಬೇಕಿರಲಿಲ್ಲ.
ಅಸೂಯೆಯಿಂದ ಇಣುಕಿದ. ಅವಳನು ಕಂಡೆ ಬಿಟ್ಟ.
ಚಂದ್ರ ವೃದ್ಧಿ ವೃದ್ಧಿಸಿದಂತೆ ನಿನ ಸೌಂದರ್ಯ ಹೀರು ಹೀರುತ್ತ ನಿನ್ನ ಮನವನ್ನು ಬರಿದು ಮಾಡಿದ ಬಡ್ಡಿಮಗ.
ನಾನು ಮತ್ತೆ ಚಂದ್ರನ ನೋಡ ಹೊರಟಾಗ ಆತ ಕ್ಷಯಿಸತೊಡಗಿದ್ದ. ನಿನ್ನ ಕಾಡಿದ ಪಾಪ ಆತನ ಹಾಗೇ ಬಿಡುವುದೇನು ಹೇಳು. ?
" ಮೊದಲ ದಿನದ ಬೆಳ್ಳಿಗೆರೆಯಿದ್ದಾಗ ನೀನೆಷ್ಟು ಸುಂದರನಿದ್ದೆ ಚಂದಮ... ಬೆಳೆದಂತೆ ದಿನಗಳೆದಂತೆ ಹಾಳಾದೆ. ರೋಹಿಣಿ ಇದ್ದೂ ಹೆಚ್ಚಿಗೆ ಬಯಸಿ ತಪ್ಪು ಮಾಡಿದೆ ನೀನು. ನಾನು ಬರುತ್ತೇನೆ. ನಿತ್ಯವೂ ಬಂದು ನಿನಗೆ ಬೈದೇ ಹೋಗುತ್ತೇನೆಂದವ.. ಇಂದಿನವರೆಗೂ ಒಂದು ದಿನವೂ ತಪ್ಪಿಸಿಲ್ಲ.
(ಛಾಯೆ: ವಾಣಿ ಹೆಗಡೆ )
"ಮರ್ಯಾದಿಲ್ಲದವ ನೀನು, ಚಂದ್ರ."
ಎಚ್ಚರದಿಂದಲೇ ಬೈದೆ.
ಲಜ್ಜೆ ಗಟ್ಟವ ಕತ್ತಲಾದ ಮೇಲೇ ಬರುತ್ತಾನೆ.
ಆ ನೋಟಕ್ಕಿಂತ ನಿನ್ನ ಕುಡುಗೋಲೇನು ಹರಿತವಿಲ್ಲ ಬಿಡು.
#ಪ್ರತಿಪಚ್ಚಂದ್ರ
Comments