ಮುಂಜಾನೆಯ ಎಳೆ ಬಿಸಿಲು...
ಸುಖ ಎಂದರೆ ಯಾವುದೆಂದು ಕೇಳಿದರೆ ನೀನು, ಚಳಿಗಾಲದ ಮುಂಜಾನೆಯ ಎಳೆಬಿಸಿಲೆಂದು ಕೊಂಚವೂ ಯೋಚಿಸದೆ ಹೇಳಬಹುದು. ಬೆಳಗಿನ ಬಿಸಿಲೇ ಹಾಗೆ. ಹಿತವಾಗಿ ಬೆಚ್ಚಗಾಗಿಸುತ್ತ ಬಿಸಿ ಮಾಡುತ್ತದೆ. ಆ ಕ್ಷಣವನ್ನು ತಡೆದು ನಿಲ್ಲಿಸುತ್ತದೆ. ಆ ಎಳೆಯ ಕಾವಿಗೆ ಅನಂತವಕಾಲ ಹಾಗೇ ಇರಬೇಕನಿಸುತ್ತದೆ. ಎಳಸುತನದ ಸೆಳತವೇ ಅಂತದ್ದು.
ಬೆಳಗಿನ ಉಪಾಹಾರ ಮುಗಿಸಿ ಮನೆಯ ಅಂಗಳದಲ್ಲಿ ಎಳೆ ಬಿಸಿಲು ಕಾಸುತ್ತ ನಿಂತರೆ ಸ್ವರ್ಗ ಸುಖ. ಅದು ಅತ್ಯಂತ ಆಹ್ಲಾದಕರ. ಚಿಕ್ಕವರಿದ್ದಾಗ ಬೆಳ್ಳಂಬೆಳಗ್ಗೆ ಎದ್ದು ತಕ್ಷಣವೇ ಒಲೆ ಮುಂದೆ ಅರ್ಧ ಮುಕ್ಕಾಗಂಟೆ ಕೂತು ಬೆಂಕಿ ಕಾಯಿಸಿದ್ದ ನೆನಪು ಅದೆಷ್ಟು ಮಜ.
ನಂತರ ಶಾಲೆಗೆ ನಾವು ಹೊರಡೋ ಹೊತ್ತಲ್ಲೇ ಈ ಎಳೆ ಬಿಸಿಲು 'ನಿಲ್ಲು ನಿಲ್ಲೆಲೇ..' ಎನ್ನುತ್ತಿತ್ತು. ಮೊದಲೇ ತಡವಾಗಿರುತ್ತಿತ್ತು. ಮತ್ತೆ ನಿಲ್ಲುವುದೆಲ್ಲೆ?
ಮರಗಿಡಗಳ ನಡುವಿನ ದಾರಿಯಲ್ಲಿ ಸಾಗುವಾಗ
ನೆರಳು ಬಂದಾಗ ಓಡಿ ಮಧ್ಯೆ ಬಿಸಿಲು ಬಿದ್ದ ಜಾಗದಲ್ಲಿ ಎರಡೇ ಎರಡು ಕ್ಷಣ ನಿಂತು ಆದರೂ ಬಿಸಿಲಿ ಹೊತಸ್ಪರ್ಶ ಪಡೆವ ಘಳಿಗೆ ಇನ್ನು ಬಾರಲುಂಟೇ?
ಊರದಾರಿಯಲ್ಲಿ ಸಹ ಹಿರಿಯರು ಬಿಸಿಲು ಮಚ್ಚಿನಲ್ಲಿ ಕೈ ಕಟ್ಟಿ, ಕವಳ ಹಾಕಿಕೊಂಡು ನಿಂತು ಬಿಸಿಲು ಕಾಸುತ್ತಿದ್ದರೆ, ಈ ಸುಟ್ ಶಾಲೆ ಇರದೆ ಇದ್ರೆ ನಾವೂ ದೊಡ್ಡವರಂಗೆ ಆರಾಮ್ ಬಿಸಿಲು ಕಾಸಬಹುದಿತ್ತು ಎಂದು ಅನಿಸುತ್ತಿತ್ತು. ದೊಡ್ಡವರಿಗೆಷ್ಟು ಸುಖ ಅನುಕೂಲ ಅಂತನಿಸುತ್ತಿತ್ತು. ಈ ಅಸೂಯೆಗೆ ಕಾರಣ ಬಿಸಿಲೇ.
ಬಿಸಿಲು ಬಿಟ್ಟಿಯಾಗಿ ಸಿಗುತ್ತದೆ. ಆದರೆ ಬಿಟ್ಟಿ ಸಿಗುವ ಎಲ್ಲಗೂ ಮಜವನ್ನಾಗಲೀ, ಸುಖವನ್ನಾಗಲಿ ಕೊಡದೇ ನಿರುಪಯುಕ್ತ ಆಗಿರುವ ಸಾಧ್ಯತೆ ಹೆಚ್ಚು. ಆದರೆ ಪುಗಸಟ್ಟೆ ಸಿಗುವ ಈ ಬಿಸಿಲಿಗೆ ಜನ ಬೀಚುಗಳಲ್ಲಿ ಮುಗಿ ಬೀಳುವುದು ನೋಡಬೇಕು. ನೋಡುವಂಥದ್ದೇ ದೃಶ್ಯ ನಿರ್ಮಾಣವಾಗಿರುತ್ತದೆ ಅಂತಿರಾ ಮತ್ತೆ ?! ಬಿಸಿಲು ಕಾಯಿಸುವವರ ನೋಡಲೆಂದೇ ದಂಡು ನೆರೆದಿರುತ್ತದೆ. ಸುಂದರ ಇಂಥ ಮುಂಜಾನೆಯ ಆಸ್ವಾದನೆ ಯಾರಿಗೆ ಬೇಡ ಹೇಳಿ. ಅರಸಿಕರೂ ಸಹ ಇಲ್ಲಿ ಕವಿಯಾಗುತ್ತಾರೆ..ಹೀಗೆ ಹಗಲಕನಸು ಗರಿ ಬಿಚ್ಚುವುದು ಈ ಬಿಸಿಲು ಮಚ್ಚಿನಲ್ಲಿ.
ಮಲೆನಾಡಿನ ಬೆಳಗಿನ ಇಬ್ಬನಿ , ಹರಿದಾಡುವ ಮರದಗಿಡದ ನೆರಳು. ಅಡಿಕೆ ಹರವಿದ ಅಂಗಳ- ಅಟ್ಟದಲ್ಲಿ ಎಳೆ ಬಿಸಿಲು ಬಿದ್ದಾಗ ಅದು ಸ್ವರ್ಗ ಅನುಭೂತಿ ನೀಡುತ್ತದೆ. ಅಡಿಕೆಗೆ ಕಾವು ಕೊಡಲು ಬಂದ ಕೋಳಿ ಸೂರ್ಯ ಎಂದೆನಿಸುತ್ತದೆ.
ನಿಸರ್ಗ ಸೌಖ್ಯವು ದುಡ್ಡು ಕೊಟ್ಟು ಪಡೆಯಲಾಗದ್ದು, ಬಿಸಿಲು ಬಾ ಎಂದರೂ ಕೆಲಸ ಸಮಯವನ್ನು ಬಿಟ್ಟುಗೊಡದೆ ಸುಖವನ್ನೂ ಕಟ್ಟಿ ಹಾಕುತ್ತದೆ.ಅದೇನೇ ಇರಲಿ ಸವುಡು ಮಾಡಿ ಬಿಸಿಲು ಕಾಯಿಸುವ ಸುಖ ಮಿಸ್ ಮಾಡಿಕೊಳ್ಳಬೇಡಿ.
-
ಮಹೇಂದ್ರ ಸಂಕಿಮನೆ
Comments