top of page
  • Writer's pictureಮಹೇಂದ್ರ ಸಂಕಿಮನೆ

" ನೆನಪೆಂಬ ಬಸ್ಸೇರಿ "



ಬಸ್ಸು ಏಕೆ ಬಸ್ ನಿಲ್ದಾಣದಲ್ಲಿ ನಿಲ್ಲುತ್ತದೆ?

ಕೂರಲಾಗುವುದಿಲ್ಲ ಅದಕ್ಕೆ.


ಈ ಜೋಕು ಕೇಳದವರಿಲ್ಲ.


ಅಂತಹ ಬಸ್ ನಿಲ್ದಾಣವೊಂದು ಧರಾಶಾಯಿಯಾಗಿದೆ.

ಅದೆಷ್ಟೋ ವರ್ಷಗಳ ನಂತರ ನೆನಪಿನ ಇಮಾರತ್ತು, ಶಿರಸಿ ಹಳೆ ಬಸ್ ನಿಲ್ದಾಣ ನೆಲಕ್ಕುರುಳಿದೆ. ಇನ್ನದು ನೆನಪು. ಹಳತರ ಮೇಲೆ ಹೊಸತು ಕಟ್ಟಿದರೂ ಹಳೆಯ ನೆನಪುಗಳು ಸಮಾಧಿಯಾಗುವುದಿಲ್ಲ, ಅಡಿಪಾಯವಾಗಿ ನಿಲ್ಲುತ್ತವೆ.


ನಿಲ್ದಾಣವಿರದೇ ಹೋದರೆ ಬಸ್ಸುಗಳು ಪರದೇಶಿಯಾಗಿಬಿಡುತ್ತವೆ.

ಇತ್ತೀಚೆಗಂತೂ ಬಸ್ಸುಗಳ ಆವಾಜು ಕಮ್ಮಿ ಯಾಗಿ ಮೌನವ್ರತ ಧಾರಿಯಾಗಿವೆ ಅನ್ನುವಷ್ಟು. ಕಾಣದ ವಿಷಾಣುವಿನ ಹಿನ್ನೆಲೆ ಬಸ್ಸುಗಳ ಓಡಾಟಕ್ಕೆ ಕಡಿವಾಣ ಬಿದ್ದದ್ದಂತೂ ನಿಜ. ಸರಕಾರಿ ಬಸ್ಸುಗಳೇ ಹಿಂಗಾಗಿರುವಾಗ, ಇನ್ನು ಸಾಹುಕಾರೀ ಬಸ್ಸುಗಳೂ ಸ್ತಬ್ಧವಾಗಿವೆ.


ಬಸ್ಸೆಂದರೆ ಬರೀ ಲೋಹದೇಹಿ, ರಬ್ಬರಿ ಟಾಯರಿನ ಹೊಗೆಕಾರುವ ಯಂತ್ರವಲ್ಲ, ಅದೊಂದು ಭಾವನೆ ಎಂದರೆ ಅತಿಶಯೋಕ್ತಿಯಲ್ಲ.



ನೆನಪಿನ ನಿಲ್ದಾಣದಲಿ....


ಬಸ್ ನಿಲ್ದಾಣದಲೊಮ್ಮೆ ಕಣ್ಣು ಹಾಯಿಸಿದಾಗ ಕಾಣುವ ಕೆಂಪು, ಹಸಿರು, ಆಕಾಶನೀಲಿ ಬಣ್ಣದ ಬಸ್ಸುಗಳು. ಕೆಲವಕ್ಕೆ ಕಪ್ಪು ಬೋರ್ಡು, ಕೆಲವು ಕೆಂಪನೆ ಹೆಸರಿನವು.

ಬೋರ್ಡಿರದ ಬಸ್ಸನು ಹತ್ತುವರಿಗೆ ಇದು ಯಾವ ಲೆಕ್ಕ?


ಕೆಲವು ಬಸ್ಸಿಗೆ ತಗಡಿನಲ್ಲಿ ಬರೆಸಿದ ಬೋರ್ಡಿಲ್ಲದೆ ಬಸ್ ಗ್ಲಾಸಿನ ಮೇಲೆ ಖಡು/ಚಾಕ್ಪೀಸಿಂದ ಹಣೆಬರ ಬರೆವ ಸಾರಥಿ.


ಮೊದಲು ಅಕ್ಷರ ಕಲಿಕೆಯ ಮಟ್ಟ ಅಳೆಯುತ್ತಿದ್ದ ಮಾನದಂಡವೇ ಈ ಬಸ್ಸಿನ ಬೋರ್ಡು ಎಂದು ನಾವು ಮರೆಯಬಾರದು.

'ಬಸ್ಸು ಬೋರ್ಡು ಓದುವಷ್ಟಾದರು ಬರ ಕಲ್ತರೆ ಸಾಕಾಗಿತ್ತು' ಎನ್ನುವ ಮಾತು, ಬೈಕು-ಕಾರುಗಳ ಅಡಿಗೆ ಆಕ್ಸಿಡೆಂಟಾಗೋಗಿದೆ.

ಈಗ, ಕಾಲೋಚಿತವಾಗಿ, ಫೇಸ್ಬುಕ್ ಕಮೆಂಟ್ ಓದುವಷ್ಟಾದರೂ ಅಕ್ಷರ ಬೇಕು ಎನ್ನೋಣವೇ?


ಬಸ್ಸಿಗೆ ಬೋರ್ಡೆಷ್ಟೇ ಬರೆದರೂ ಇದು ಎಲ್ಲಿಗೆ ಹೋಗುತ್ತದೆ ಎಂದು ಕಂಡಕ್ಟರ್ ನನ್ನೋ , ಬೇಕಾದ ಅಪರಿಚಿತರನ್ನೋ ಕೇಳುವ ಜನ ಕಮ್ಮಿ ಇರಲಿಲ್ಲ..ಅವರು ಕೊಡುತ್ತಿದ್ದ ಉತ್ತರ - '.. ಎದುರಿಗೆ ಬರ್ದ ಬೋರ್ಡ ಕಣ್ ಕಾಣ್ಸುದಿಲ್ಲ? ' ಎನ್ನುವ ಅಮಸಾಣಿ , ಹುಳಸೆಹಣ್ಣು ಮಾತುಗಳೆ ಅದೆಷ್ಟೋ ಜನರಿಗೆ ಆಸರೆ. ಆಪ್ಯಾಯಮಾನ. ಅದಿಲ್ಲದೆ ಅವರು‌ಮುಂದೆ ಸಾಗರು.


ಶಾಲೆ ಹುಡುಗರು ವರ್ಸಸ್ ಕಂಡಕ್ಟರ್


ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುಗಮವಾಗಲೆಂಬ ಘನ ಉದ್ದೇಶ ದಿಂದ ಬಸ್ ಪಸು ಕೊಟ್ರೆ, ಈ ಹುಡುಗರು ಲೆಕ್ಕವಿಲ್ಲದಷ್ಟು ಬಾರಿ ತಿರುಗಿ ಕಂಡಾಕ್ಟರ್ ಕೆಂಗಣ್ಣಿಗೆ ಗುರಿಯಾಗಿ ಬಿಟ್ಟದ್ದಿದೆ.


ಕೇಳಿದರೆ, " ನಿಮ್ಮಪ್ಪನ ಮನೆದ ಬಸ್ಸು ? ...ಪಬ್ಲಿಕ್ಕು ಪಬ್ಲಿಕ್ಕಿಂದು ..?! ಗವರ್ಮೆಂಟುದು !! ಎಂದು ಇಕ್ಕಿಸಿಕೊಂಡ ಘನಾಂಧಾರಿಗಳೆಷ್ಟಿಲ್ಲ.


ಪ್ರಾಯದ ಮದ !!

ಮೀಸೆ ಬಂದಾಗ ದೇಶ ಕಾಣೊಲ್ಲ ಎಂದಿರುವಾಗ ಪಾಪ ಖಾಕಿ ಕಂಡಕ್ಟರ್ ಕಂಡಾನೆಯೇ ?


ಅಂದ ಹಾಗೆ, ವಿದ್ಯಾರ್ಥಿಗಳಿಗಾಗಿ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿತಂದವರು ದಿ. ರಾಮಕೃಷ್ಣ ಹೆಗಡೆಯವರು ಎಂಬುದನ್ಜು ಅರಿತೇ ಓಡಾಡಬೇಕು ಅಂತ ಕಾನೂನೇನಿಲ್ಲ. ಅದು ಕನಿಷ್ಠ ಪ್ರಜ್ಞೆ ಸಾಮಾನ್ಯ ಜ್ಞಾನದ ಸಂಗತಿ. ಕೊಂಚ ತಿಳಿದಿರಲಿ.


ಆಲ್ರೈಟ್ ಮುಂದ್ಕೊಗಾಣಾ..


ಬಸ್ಸಿನ ಅನೌನ್ಸಮೆಂಟೇ ವಿಶಿಷ್ಟ. ಗೊರಗುಡುವ ಮೈಕಿನಲ್ಲಿ ಬಸ್ಸು ಹೊರಡಲಿದೆ ಎನ್ನುವದು ಯಾರಿಗೆ ಹೇಳಿದ್ದರೋ , ಯಾರು ಕೇಳಿದ್ದರೋ ಕಾಣೆ.


ದಿನನಿತ್ಯದ ಸಾರಿಗೆಯ ಬಸ್ಸುಗಳು ನಮ್ಮಲ್ಲಿ ಬಾಳ ಫೇಮಸ್ಸು.. ಕೆಲವು ಜನರ ಗುರುತು ಹಿಡಿಯುವುದೇ ಈ ಲೋಕಲ್ ಬಸ್ಸಿನಿಂದ..


ಅಂವ ಈ ಬಸ್ಸವ, ಇದು ಆ ಬಸ್ಸಿಗೆ ಬರ್ತದೆ, ಅವರು ಆ ಬಸ್ಸಲಿ ಓಡಾಡುದು ಇವರು ಇದೇ ಬಸ್ಸು ಬಿಟ್ರೆ ಬೇರೆದು ಹತ್ತುದಿಲ್ಲ ಚಾಲೆಂಜ ..?

ಹಿಂಗೇ ಫಿಕ್ಸಾಗಿದ್ದ ಪಕ್ಕಾ ಕಾಲ ಅದು.


ಬಾಳೇಸರ, ಗೋಳಿಮಕ್ಕಿ, ಸಾಲ್ಕಣಿ, ವಾನಳ್ಳಿ, ಬಕ್ಕಳ ಜಡ್ಡಿಗದ್ದೆ ,ಅಬ್ಬಿಗದ್ದೆ, ಮತ್ತಿಘಟ್ಟಾ- ಜಾನ್ಮನೆ, ಬಂಡಲ ಹೇರೂರು-ಹೆಗ್ಗರಣಿ, ಬೆಡಸಗಾಂವ,ಶಿವಳ್ಳಿ, ಶಿವಳಮನೆ.....ಅಯ್ಯಯ್ಯಪ್ಪಾ !!


ಇಲ್ಲಿ ಅಷ್ಟೂ ತಂದು ನಿಲ್ಲಿಸಲಿಕ್ಕೆಂತೂ ಆಗೋಲ್ಲ. ಯಂತಕ್ಕೆ ಅಂದ್ರೆ ಜಾಗ ಇಲ್ಲ.


ಎಕ್ಸಪ್ರೆಸ್ ಬಸ್ಸುಗಳಿಗೆ ಕೆಲವು ದೂರದ ಹುಡುಗರ ಪಾಸುಳ್ಳವರಿಗೆ ಕೊನೆಯ ಸರದಿ. ಹಾಗಾಗಿ ಕಂಡಕ್ಟರ್ ಒಂಥರಾ ವಿಲನ್. ಆಗಾಗ ಅವಕಾಶ ಸಿಕ್ಕಾಗ ಜಟಾಪಟಿ.

' ನಾಳೆ ಅಡ್ಡ ಹಾಕುದೇ ಮತೆ..'!! ಎಂಬ ಹಲ್ಲುಮಸೆತ.


ಬಸ್ಸೆಂದರದು ಬೇರೆಯದೇ ಪ್ರಪಂಚ..


ಎಡಗಾಲಿಟ್ಟು ನಗರಕ್ಕೆ ಹೋಗಬೇಕಂತೆ. ಬಲಗಾಲಿಟ್ಟು ಬೀಗರ ಮನೆಗೆ. ಬಸ್ಸಿಗೆ ನೀವು ಹೇಗೆ ಹತ್ತಿ ನೋ ಪ್ರಾಬ್ಲಂ.

ಆದ್ರೆ ಕಾಲಿಟ್ಟು ಹತ್ತಿ. ಹೋಗುವ ಬಸ್ಸು ಹತ್ತಲೂ ಬೇಡಿ , ಹಾರಲೂ ಬೇಡಿ.


ಕಿಟಕಿಯಿಂದ ತಲೆ ಮಾತ್ರ ಯಾವತ್ತೂ ಹೊರಹಾಕಬೇಡಿ..ಒಂದು ಸಂದರ್ಭ ಹೊರತು ಪಡಿಸಿ.


ಒಮ್ಮೆ, ನಿತ್ಯದ ರೂಟೀನ್ ಬಸ್ಸಿಗೆ ಏರಬೇಕು. ಅದೇ ಮಜ. ಅದೊಂದು ಜಗ. ಸಮಯವನ್ನು ಆಧರಿಸಿ ಬದಲಾಗುವ ವಾತಾವರಣ. ದಿನವಾಧರಿಸಿ ಚೇಂಜಾಗುವ ಹವಾಮಾನ. ಶಾಲೆ ಕಾಲೇಜು ಮುಗಿವ ಹೊತ್ತು. ಸಂಜೆಯ ಬಸ್ಸು . ಒಂದನೇ ತರಗತಿಯ ಪಿಳ್ಳೆ ಪುಟಾಣಿಯಿಂದ ಹಿಡಿದು ಡಿಗ್ರೀ ಡಾನಿನವರೆಗೆ, ಒಂಬತ್ತು ತಿಂಗಳ ಕೂಸಿನಿಂದ ಹಿಡಿದು ತೊಂಬತ್ತರ ಮುದುಕಿವರೆಗೆ, ಸರ್ಕಾರಿ ಕೆಲಸದವಿರಲಿ, ಗುಟಕಾ ಹಾಕುವವ ಇರಲಿ, ಕವ್ಳ ಉಗಿಯಂವ ಆಗಲಿ, ಕುಡಿದು ರಶ್ ಇದ್ದದ್ದರಿಂದ ನೆಟ್ಟಗೆ ನಿಂತವನಿರಲಿ,

ಟಿವಿ ,ಹಂಡೆ ತಂದ ಬಡವ ಇರಲಿ,ಬ್ರೀಫ್ಕೇಸಿನ ಬಾಸ್ ಇರಲಿ, ತರಕಾರಿ ತಂದ ಹೆಂಗಸಿರಲಿ, ಬೇಡುವವರಿರಲಿ,ಬಸ್ಸಿನ ರೆಂಜೇ ಬೇರೆ. ಎಲ್ಲರಿಗೂ ಸುಸ್ವಾಗತ. ಮತ್ತೆ ಬನ್ನಿ.


ಅವಾಂತರ


ದೂರ ಪ್ರಯಾಣ ದಲ್ಲಿ ಸಾಮಾನ್ಯ ಸಂಗತಿ ವಾಂತಿ ಎಂಬ ನಿಮಗೆ ಗೊತ್ತಿದೆ. ಅದು ಕೆಲವು ಸಲ ಸಾಂಕ್ರಾಮಿಕ ವಾಗಿದ್ದ ಸಮಸ್ಯೆಯೇ.


ಒಮ್ಮೆ, ಗುಲಾಬಿ ಗಿಡ ತಂದವಳು ತುಂಬಿದ ಬಸ್ಸನ್ನೇರಿ ಅಲ್ಲಿದ್ದವರ ಮೈ ಹರಕಿದ, ಪರಚಿದ ವಿಷಯ ಹಸಿರಾಗಿರುವಂಥದ್ದು. ಬೈದರೂ ಬಿಡದ ಸಸ್ಯ ಪ್ರೇಮದ ಬಗ್ಗೆ ದೂಸರಾ ಮಾತಿಲ್ಲ. ಯಾಕೆಂದರೆ ಹಸಿರು ಬರಗಿ ಬರಡಾಗಿಸಿದವರು ನಾವೇ. ಅದು ಚುಚ್ಚಿದರೆ ?? ಕಿಂ ಕಂ ಅನ್ನಬಾರದು.


ಇನ್ನು, ಬಸ್ಸಿನ ನಾಗಂತಿಕೆಯವಮೇಲೆ ಇರಿಸಿ ನೀರೊ.., ಬೆಲ್ಲವೋ , ಸಾರೋ ಖೀರೋ ಬಸ್ಸು ಬ್ರೇಕು ಹಾಕಿದಾಗ, ತಿರುವಿನಲ್ಲಿ ತೊಣಕಿದಾಗ, ಹಂಪು ಹಾರಿದಾಗ ಎಷ್ಟೋ ಜನರಿಗೆ ಅಭಿಷೇಕ ಮಾಡಿದೆ. ಯಾವ ಜನ್ಮದ ಶಿವನೋ ಆತ . ಬೋಳು ತಲೆಯಾಗಿ ಬಿಸಿಯಾಗಿದ್ದರಂತೂ ಮಾತಾಡಿಸುವ ಆಟವಿಲ್ಲ.

ಪಾಪ ಟಿಪ್ ಟಾಪಾಗಿ ಇನ್ಶರ್ಟ್ ಮಾಡಿದ ಸ್ಟ್ಯಾಂಡರ್ಡ್ ಪಯಣಿಗನ ಡಿಗ್ನಿಟಿಗೆ ಶಾಸ್ತಿ ಮಾಡಿಸಿದ್ದಿದೆ.


ಕೆಲವು ಸಲ ನೈಲಾನ್ ಚಿಲಿದಲಿ ಕಟ್ಟಿ ತಂದ ಕೋಳಿ ಕೊಕ್ಕೊ..ಕೋ...ಕೋ... ಎಂದು ಕೂಗಿ ಪಾಪ!! ಹೆಂಗಸರು, ಯುವತಿಯರನ್ನು ಕಂಗಾಲಾಗಿಸಿದ್ದು ಯಾವ ಹಾಸ್ಯಕ್ಕೂ ಸಾಟಿಯಾಗಲಾರದು. ಇನ್ನು ಕೋಳಿ ಬಿಡಿಸಿ ಕೊಂಡು ಓಡಿದರೆ ಹೇಗಾಗಬೇಡ..!!

ಜಸ್ಟ್ ಇಮ್ಯಾಜಿನ್..!!


ಬಸ್ಸಿನ ಬೆಚ್ಚನೆ ಸೀಟು...


ಬಸ್ಸು ಜ್ಞಾನ ದೇಗುಲವೂ ಹೌದು. ಪ್ರೇಮ‌ಮಂದಿರವೂ ಹೌದು. ಜಗಳದ ಜಾಗವೂ ಹರಟೆಯ ತಾಣವೂ ಹೌದು. ಕೊನೆ ಸೀಟು ಕೆಲವರಿಗೆ ಕಾಲು ಚಾಚಿ ಮಲಗುವ ಬೆಚ್ಚನೆ ಹಾಸಿಗೆ. ಬಸ್ಸಿನಲ್ಲಿ ನಿದ್ರೆ ಬಾರದ/ ಮಾಡುವ ವರ್ಗವೇ ಬೇರೆ ಇದೆ.


ಮೊಬೈಲ್ ಕೈಲಿರದ ಅಂದು ಮಾತಿಗೆ ಆಸ್ಪದ ಇತ್ತು. ಮೌನಕ್ಕೆ ಬೆಲೆ ಇತ್ತು. ಮನಸುಗಳು ಅಷ್ಟೇ.

ಹಾಗಾಗೇ ಎಷ್ಟೋ ಜನ, ಫಸ್ಟ ಬಸ್ ಫ್ರೆಂಡ್ಸ ಆಗಿ, ಲಾಸ್ಟ್ ಬಸ್ ಗೆಳೆಯರಾಗಿ, ಮುಂದು ಸೀಟಿನ ಮಿತ್ರರಾಗಿ, ಒಂದೇ ಬಸ್ಸಿನ ಆಪ್ತರಾದದ್ದನ್ನು ಮರೆಯುವುದುಂಟೆ..?

ಛೆ..ಛೆ.. ಆಗದು ಆಗದು..!!


ಅದೆಷ್ಟೋ ಜನರ ಪ್ರೀತಿ ಮೊಳಕೆ ಒಡೆದದ್ದು ಬಸ್ಸಿನ ಕಾರಣದಿಂದ, ಕಿಟಕಿಯ ಕದ್ದು ನೋಟದಿಂದ ಮೊದಲಾಗಿ, ಒಂದೇ ಸೀಟಿನಲಿ ಪಯಣಿಸುವ ಪ್ರಣಯಿಗಳಾಗಿ,

"ಬಾಳೆಂಬ ರಥದಲ್ಲಿ ಒಲವೆಂಬ ಪಥದಲ್ಲಿ , ನಗುವೆಂ,ಬ ಹೂಚೆಲ್ಲಿ.. "ಎಂದು ಪಿಬಿ ಕಂಠದ ಹಾಡು ಗುನುಗಿ

ಪ್ರೇಮಿಗಳಾಗಿ ಇಂದು ಬಾಳಸಂಗಾತಿಗಳೂ ಆಗಿ ನಮ್ಮ ನಿಮ್ಮ ಅಕ್ಕ ಪಕ್ಕದಲ್ಲಿ ಇರಬಹುದು. ಅಥವಾ ಈಗ ಓದಿ ಮುಸಿ ನಗುತ್ತಲೂ ಇರಬಹುದು. ಇದ್ದರೆ ಹೇಳಿಬಿಡಿ, ನಿಮ್ಮ ಸಂತಸ ಇಮ್ಮಡಿಸಲಿ.


ಗೊತ್ತಿರುವ ತಿರುವು ಪಡೆದ, ಗೊತ್ತಿರದೆ ಟ್ರೈ ಆ್ಯಂಗಲ್ ಆದ, ಯೂ ಟರ್ನ್ ಹೊಡೆದ , ಎಂದೂ ಗುರಿ ಸೇರದ, ಪಂಚರ್ ಆಗಿ ರಿಪೇರಿ ಆದ ಮೇಲೆಯೇ ಸರಿ ಯಾಗುವ ,ಲೈಟಾಗಿ ಆ್ಯಕ್ಸಿಡೆಂಟಾದ, ಸೀರಿಯಸ್ ಸೀವಿಯರ್ ಕೇಸಾದ ಲವ್ ಸ್ಟೋರಿಗಳಿಗೆ ಬರವಿಲ್ಲ. ನಮಗೆ ಎಲ್ಲವೂ ಅಷ್ಟಾಗಿ ಗೊತ್ತಿಲ್ಲ ಅಷ್ಟೇ. ಏನ್ ಲವರ್ಸ್ ಡಂಗುರ ಹೊಡ್ಕಂಡು ಹೋಗಲ್ಲ. ಸಿಕ್ರೆಟ್ ಅದು..ಕ್ಲೋಸ್ ಫ್ರೆಂಡ್ಸ್ ಗೆ ಗೊತ್ತಾಗದ ಹಾಗೆ ನೊಡಿಕೊಳ್ಳುವಾಗ, ಬಸ್ ಲ್ಲಿ ಹೇಳಿಬಿಡುತ್ತಾರಾ..?


ನಮ್ಮ ಅದೆಷ್ಟೋ ಸಂದರ್ಭ, ಸಂಗತಿ, ವಸ್ತು, ವಿಷಯಗಳೊಡನೆ, ಬೆರೆತ ಅಸ್ಮಿತೆ - ಈ ಬಸ್ಸು.

ಒಂಟಿ ಪಯಣದದಲ್ಲೂ ಸಾಥಿಯಾದ ಸೀಟು ಎಷ್ಟೋ ಕಥೆ ಹೇಳುತ್ತದೆ.


ಯಾರೋ ಕೆತ್ತಿದ ಎರಡು ಕ್ಯಾಪಿಟಲ್ ಲೆಟರ್ ಕುತೂಹಲ ಕೆರಳಿಸುತ್ತದೆ.


ಚಾಲಕನ ಹಿಂದುಗಡೆ, ಸ್ಟೀಲು ಹಲಗೆ ಮೇಲೆ ಹಳದಿ ಭಿತ್ತಿಯ ಮೇಲೆ ಕೆಂಪು ಅಕ್ಷರದಿ ಬರೆದ ;


"ಇರುವ ಭಾಗ್ಯವ ನೆನೆದು

ಬಾರೆನೆಂಬುದನು ಬಿಡು

ಹರುಷಕಿದೆ ದಾರಿ ಮಂಕುತಿಮ್ಮ " - ಡಿ.ವಿ.ಜಿ.


ಎಂಬ ಕಗ್ಗದ ಸಾಲಂತು ಸದಾ ಗುನುಗುನಿಸುತ್ತಿರುತ್ತದೆ.


"ಚಿಲ್ಲರೆ ಕೇಳಿ ಪಡೆಯಿರಿ" ...ಅಲ್ಲಲ್ಲ ,

"ಟಿಕೆಟ್ ಕೇಳಿ ಪಡೆಯಿರಿ " , ಎಂಬುದು ವಿಜ್ಞಾಪನಾ ವಾಕ್ಯ.


ನೀಲಿ ಸೀಟಿನ ಹಿಂದುಗಡೆ " ಟಿಕೆಟ್ ರಹಿತ ಪ್ರಯಾಣಕ್ಕೆ ಐದು ನೂರು ವರೆಗೆ ದಂಡ ವಿಧಿಸಲಾಗುದು ಎಂಬುದನ್ನು,

ಕೈ ತುರಿಸುವ ಕಿಡಿಗೇಡಿಗಳು ರಿಮಿಕ್ಸ್ ಮಾಡಿ ತಿರುಚಿ,


"..ಐದು ನೂರರ ವರೆಗೆ ಗಂಡ ವಿಧಿಸಲಾಗುವುದು " ಎಂದೆಲ್ಲ ಆದದ್ದು ಓದಿ ಓದಿ ಸಾಕಷ್ಟು ನಗೆ ತರಿಸಿತ್ತು.


ಬಸ್ಸು ಈ ರೀತಿ ಹೇಳಿಕೆಗಳ ಮಿನಿ ಓದುಶಾಲೆ.

ಇಂದು ಖಾಸಗಿ ವೆಹಿಕಲ್ಲಿನ ಭರಾಟೆಯಲ್ಲಿ ಈ 'ಸಾವ್ರಜನಿಕ' ಜೀವನ ನೇಪಥ್ಯಕ್ಕೆ ಸರಿದಿದೆ.


ಕೊನೆಯದಾಗಿ,

ಬಸ್ಸಿನೊಡನೆ ಎರಡು ಸಂಗತಿ


ಅಜ್ಜನಮನೆಗೆ ಹೊರಟಿದ್ದೆ. ಅದು ಕನ್ನಡ ಶಾಲೆಯ ಮೂರೋ ನಾಲ್ಕರಲ್ಲಿಯೋ ಇದ್ದಾಗ. ಅಜ್ಜನ ಮನೆಗೆ ಹೋಗುವುದು, ಬಸ್ಸಿನ ಮೇಲೆ ಸುಮಾರು ಒಂದೂಕಾಲು ತಾಸಿನ ಪಯಣ. ಈ ಕಿಡಕಿಗಳಲ್ಲಿ ಕತ್ತು ತಿರುಗಿಸಿ ನೋಡುವುದಕ್ಕಿಂತ, ಬಸ್ಸಿನಲ್ಲಿ ಮುಂದೇ ಇರುವ ಬಾಗಿಲ ಬುಡದ ಇಂಜಿನ್ ಪಕ್ಕದ ಅಡ್ಡ ಸೀಟೇ ಬೇಕು. ಇಡೀ ರೋಡು ಕಂಡು ಡ್ರೈವರ್ ಥರದ ಅನುಭೂತಿ ಪಡೆವ ಹುಚ್ಚು ಆಗಿನದು.


ಹಾಗೇ ಒಮ್ಮೆ ಹೋಗುವಾಗ ಬಸ್ ಬಿಡುತ್ತಿದ್ದವ, ದಪ್ಪ ಕಂಬಳಿಹುಳು ಮೀಸೆಯ ಡ್ರೈವರ್. ಬಸ್ಸು ಹೋಗುತ್ತಿತ್ತು. ಅರ್ಧ ದಾರಿ ಕ್ರಮಿಸಿತ್ತು. ಒಂದು ಡಬ್ಬಿಯಿಂದ ಜಿಲೇಬಿ ತೆಗೆದ. ಏನನ್ನಿಸಿತೋ ಏನೋ ಅಡ್ಡಸೀಟಲ್ಲಿದ್ದ ನನಗೆ ಕೊಟ್ಟ. ಹಾಗೆಲ್ಲ ಏನಾದರೂ ಕೊಟ್ಟರೆ ತೆಗೆದುಕೊಳ್ಳುವುದಲ್ಲವಲ್ಲ.

ನಾನು ತಲೆ ಅಡ್ಡ ಅಲ್ಲಾಡಿಸಿದೆ.

"ಡ್ರೈವರ್ ಇರಲಿ ತಗೋ ತಿನ್ನು" ಅಂದರೂ ನಾ ಬೇಡ ಎಂದು.


ಕೇಸರಿ ಬಣ್ಣದ, ಸಕ್ಕರೆ ಪಾಕ ಅದ್ದಿದ, ಗರಿಗರಿಯಾದ ಆ ಜಿಲೇಬಿ ಕೈ ಚಾಚಿ ಪಾಪ ಅವನಾದರೂ ಎಷ್ಟು ಹೊತ್ತು ಹಿಡಿದಾನು?


ಮೊದಲೇ ಆ ಡ್ರೈವರ್ ಸಿಟ್ಟಿನವ ಎಂದೂ ಹೇಳುತ್ತಿದ್ದರು. ಅವನ ತಾಳ್ಮೆ ಕಟ್ಟೆ ಒಡೆಯಿತು.

ಆತ, " ತಗಳತೀಯೋ ಇಲ್ವೋ..ಬಸ್ಸಿಂದ ಇಳ್ಸಾಕಿಬಿಡ್ತೇನೆ ನೋಡು.." ಅಂತ ಕಣ್ಣು ಬಿಟ್ಟು ಅಂದಾಗ, ಅಪ್ಪನ ಮುಖ ನೋಡಿದೆ.

"ತಗೊ ತೊಂದರೆಯಿಲ್ಲ " ಅಂದ. ನಾನು ಕೈಚಾಚಿದೆ. ಇಸಿದುಕೊಂಡು ಬಾಯಿಗಿಟ್ಟೆ.


ಜಿಲೇಬಿ ತಿಂದಾಯಿತು, ಆಮೇಲೆ ಕೈ ಅಂಟಾಗುತ್ತದೆಯಲ್ಲ.. ತಿಂದ ಮೇಲೆ ಉಂಡ ಮೇಲಡ ಕೈತೊಳೆದು ರೂಢಿ, ಸೀಟಿಗೋ ಬದಿಗೊ ಒರೆಸುವುದಲ್ಲ !! ಆದರೆ, ಬಸ್ಸಲ್ಲಿ ನೀರೆಲ್ಲಿದೆ. ಹಾಗೇ ಕೈ ತೆರೆದು ಎಲ್ಲೂ ತಾಗಿಸದೇ ಹಾಗೇ ಎತ್ತಿ ಇದ್ದಿದ್ದು ಕಂಡ ಡ್ರೈವರ್, ನೀರಿನ ಬಾಟಲನ್ನೂ ಕೊಟ್ಟು ಹುಬ್ಬೇರಿಸಿದ.

ಹಸಿರದಾರಿಯ ಒಳಗೆ, ತಿರುವು ಮುರುವಿನ ನಡುವೆ, ಏರು ಇಳುಕಲುಗಳ ಜೊತೆ ಸದಾ ನೆನಪಿರುವ ಎಂದೂ ಮಾಸದ ಘಟನೆ ಇದು.


ಇನ್ನೊಂದಿದೆ,

ಸ್ನಾತಕೋತ್ತರ ಪದವಿ ಓದುವ ಸಮಯ. ಎಲ್ಲರಂತೆ ನಾವೂ ವೀಕೆಂಡಿನಲ್ಲಿ ಖಾಲಿ ಚೀಲ ಕರಡಿಗೆ ಹೊತ್ತು ಮನೆಗೆ ಮರಳಿ, ಒಂದು ದಿನ ಕಳೆದು ಮತ್ತೆ ದೂರದೂರಿಗೆ ಬಸ್ಸೇರಿ ಪಯಣ.

ನಮ್ಮ ಲೋಕಲ್ ಬಸ್ಸನು ಸರಿಯಾದ ಸಮಯಕ್ಕೆ ಹಿಡಿದರೆ ಮಾತ್ರ ಮುಂದೆ ಅನುಕೂಲ. ಸಂಜೆ ಒಳಗೆ ತಲುಪಬಹುದು.

ಅವತ್ತೊಂದು ದಿನ ಊಟಕ್ಕೆ ತಡವಾಗಿ, ಓಡೋಡಿ ಬಸ್ ಸ್ಟಾಪ್ಗೆ ಬರುವಲ್ಲಿ ಬಸ್ಸು ಸರಿಯಾಗಿ ಹೋಗಿರುವಷ್ಟು ಸಮಯ. ರೋಡಿಗೆ ಒಂದು ಫರ್ಲಾಂಗ್ ದೂರ , ಎದುರು ರೋಡು, ಅದರಾಚೆಯೆ ಬಸ್ ಸ್ಟಾಪ್. ಆಗಲೇ ಅನಿಸುವುದು ಬಸ್ಸು ಈಗ ಬಂದರೆ, ಈಗ ಪಾಸಾಗಿಬಿಟ್ಟರೆ..ಈಗ ಹೋದರೆ..

ಆ ಟೆನ್ಷನ್ ಯಾವಾಗೂ ಇರುವುದು, ಕೊಂಚ ಹೆಚ್ಚೇ ಆಗಿತ್ತು.


ಹೌದು ಹಿಂದೆ ತಿರುವಿನಲ್ಲಿ ಬಸ್ಸು ಹಾರ್ನ್ ಕೇಳಿತು...ಅದೇ ಬಸ್ಸು. ಓಡುವುದು ಹೇಗೆ. ಬೆನ್ನಿಗೆ ಬ್ಯಾಗು, ಎರಡೂ ಕೈಯಲ್ಲಿ ತುಂಬಿದ ಚೀಲ.


ಗೊತ್ತಲ್ಲ ನಿಮಗೇ..ಓದಲು ಶಹರ ಸೇರುವಾಗ ಎಷ್ಟು ತಿಂಡಿ ಒಯ್ದರೂ ಕಡಿಮೆಯೇ..ಮನೆಯಂತೇ ಇರಬೇಕು ಅಲ್ಲೂ ಎಂಬ ಮನದಿಂಗಿತ.

ಕರಡಿಗೆ ತುಂಬ ಬೆಲ್ಲ, ಉಪ್ಪಿನಕಾಯಿ, ತುಪ್ಪ, ಮನೆಯ ತೆಂಗಿನಕಾಯಿ, ಸಂಜೆಗೆ ಬೇಕಾದ ಪಲ್ಯ, ಚಿಪ್ಸು, ಲಾಡು, ಕರೆ, ಬೇವಿನಸೊಪ್ಪು, ಬಸಳೆ, ಎಲವರಿಗೆ, ಬಾಳೆಚಿಪ್ಪು, ಮಜ್ಜಿಗೆ....ಆ ಚೀಲ ಅಮ್ಮ ತುಂಬಿದರೆ ಇದರ ಎರಡರಷ್ಟಾದರು ಹಿಡಿದಿರುತ್ತದೆ. ಎತ್ತಿದಾಗಲೇ ಅಂದಾಜಾಗುತ್ತದೆ.


ಅರ್ಧ ಕೀಮೀ ಅದಾಗಲೇ ನಡೆದು.. ಈಗ ಬಸ್ಸು ಮಿಸ್ಸಾಗ ಬಾರದೆಂದು ಮಣಭಾರ ಹೊತ್ತು ಓಡಿದರೆ..ಬಸ್ಸು ಅದೋ ಅಲ್ಲಿ ಕಾಣ ಕಾಣುತ್ತ ಬಂತು. ಅಷ್ಟು ವೇಗವಾಗಿ ಬಂದರೂ ಸ್ಟಾಪಿನಲಿ ಯಾರೂ ಇಳಿಯದಿದ್ದರೂ, ಹತ್ತದವರಿದ್ದರೂ, ಬಸ್ಸು ನಿಂತಿತು...

ನಿಂತಿತಲ್ಲ ಬಸ್ಸು.. ಓಡಲೇಬೇಕು!

ಓಡಿದ್ದಕ್ಕೆ ಬಸ್ಸು ಸಿಕ್ಕಿತು..ಕಂಡಕ್ಟರ್ ,

' ಬೇಗ ಬನ್ನಿ ಆ ಚೀಲ ಕೊಡಿ ಮೊದಲು..' ಎಂದು ಇಸಿದುಕೊಂಡ..ಎರಡು ಸೀಟಿ ಹೊಡೆದ.


ನಾನು ಓಡಿ ಬರುವುದ ಕಂಡು ಬಸ್ಸೊಳಗಿಂದಲೇ, ಕಂಡಕ್ಟರ್ " ಹೊರಡೇನ್ " ಎಂದು ಬಸ್ಸು ನಿಲಿಸಿದ್ದ.

ನೋಡಿ, ದಿನವೂ ಸಾವಿರಾರು ಜನ ಓಡಾಡುವ ಬಸ್ಸು, ಕೈ ಮಾಡಿದರೆ ತಾನೆ ನಿಲ್ಲಿಸಬೇಕು. ಆತನಿಗೆ ಸಿಗುವುದೇನೂ ಇರಲಿಲ್ಲ. ಎಷ್ಟೋ ಸರತಿ ಮಾನವೀಯತೆ ಇಲ್ಲ ಎಂದಾಗ ಅಥವಾ ಕೆಲ ಸಂದರ್ಭಗಳಲ್ಲಿ ಇದು ಕಾಡುತ್ತದೆ. ಬೆಳ್ಳಂಬೆಳಗ್ಗೆ ಕೈ ಮಾಡಿದರೂ ನಿಲ್ಲಿಸದೇ ದೂರದ ಪಯಣವೋ, ಪರೀಕ್ಷೆಯನು ತಪ್ಪಿಸಿಕೊಳ್ಳುವ ಸಂದರ್ಭವಿದೆ.


ನಾವು ಬಸ್ಸಿಗಾಗಿ ಕಾದು ಕಾದು ಬಂದ ಮೇಲೂ ಬುಸ್ಸನೆ ಹೋದ ಘಟನೆಯೂ ಇದೆ. ನಮಗಾಗಿಯೇ ಕಾದಾಗ, ಇನಿತು ಕೃತಜ್ಞತೆ ಸಲ್ಲಿಸದಷ್ಟು ಕೃತಘ್ನ ನಾನಾಗದಿರಲೆಂದು ಆಶಯ. ಅಂತಹ ಮಾನವೀಯತೆಯೋ ಕಳಕಳಿಯೋ ಒಟ್ಟಾರೆ ಮೌಲ್ಯಕ್ಕೆ ನನ್ನದೊಂದು ಆಭಾರ. ಸಮಯವಾದಾಗ ಸಲ್ಲಿಸಿಬಿಟ್ಟರೆ ಮನಸೂ ಹಗುರ.


ಇಂದು ಬಸ್ಸುಗಳು ಅಷ್ಟಾಗಿ ಓಡಾಡದಿರುವಾಗ ಬಹುದಿನದಿಂದ ಬಾಕಿ ಉಳಿದ ಭಾವ ಬರೆದು ಬಿಡಬೇಕೆನಿಸಿತು. ಮಾನಸಿಕ ಬಿಡುವು ಅನುಕೂಲವಾಯಿತು. ಇದು ಭಾವನೆಯ ಬಸ್ಸು ನೀವೂ ಪಯಣಿಸಿದ್ದೀರೆಂದು ಅಭಿಮತ. ಸರಕಾರಿ ಸಾರಿಗೆಗೆ ಇದು ಸಮರ್ಪಣೆ.


ಹೋಗದೂರಿನ ದಾರಿ,

ಕೇಳಿ ಮಾಡುವುದೇನು?


ಒಮ್ಮೆನೆನಪಿನ ಬಸ್ಸೇರಿದರೆ

ನೀ ಕಳೆದುಕೊಳ್ಳುವುದೇನು?


-ಮಹೇಂದ್ರ ಸಂಕಿಮನೆ.

412 views0 comments

Recent Posts

See All

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ. ಇಂದು ದುಡ್ಡು ಎಲ್ಲರ ಬಳಿ

Post: Blog2_Post
bottom of page