top of page
  • Writer's pictureಮಹೇಂದ್ರ ಸಂಕಿಮನೆ

ಮರಳಿ ಬಾ...ಮಳೆಯ ಮಧುರ ನೆನಪೇ..

Updated: Sep 5, 2023

ಕನ್ನಡ ಶಾಲೆಯ ಪಟ್ಟಿಯ ಆನೀಲಿ ಗೆರೆ, ಮೃದುವಾದ ಹಳದಿ ಹಾಳೆ ಎಂದೋ ಮರೆತಾಯಿತು. ಆ ಪಟ್ಟಿಗಳನ್ನು ರದ್ದಿಗೆ ಕೊಟ್ಟು ಅಬ್ಬಬ್ಬ ಅಂದರೆ ಸಿಗುವುದು ಮೂವತ್ತು ರೂಪಾಯಿ. ಅದರಿಂದ ಪ್ಲಾಸ್ಟಿಕ್ ಚೊಂಬು ಖರೀದಿಸಿ, ಮತ್ತೆ ಅದೂ ಒಡೆದು ಮಣ್ಣಿನಲಿ ಬೆರೆಯದೇ, ಸುಡಲೂ ಅಯೋಗ್ಯವಾಗಿ ಉಳಿದು ಬಿಡುವುದು. ಆ ಪಟ್ಟಿಗಳನ್ನು ಹಾಗೇ ಇಡುವುದೇ ಚೆನ್ನ.

ಯಾಕೆಂದ್ರೆ, ಆ ಹಾಳೆಗಳನ್ನು ಇಲಿ ಕಡಿದು, ಅದನ್ನು ಮನೆಯ ಬೆಕ್ಕು ನುಂಗುತ್ತದೆ. ಆ ಬೆಕ್ಕು ಮರಿ ಹಾಕಿ ಮನೆ ತುಂಬ ಮತ್ತೆ ಅವು ಪಟ್ಟಿಗಳ ಮೇಲೆ ಓಡಾಡುವ ಸಂತೋಷ ಬೇಕೋ? ಅಥವಾ ಪ್ಲಾಸ್ಟಿಕ್ ಚೊಂಬೋ...ನಿಮ್ ನಿಮ್ಗೆ ಬಿಟ್ಟಿದ್ದು.


ಅದಿರಲಿ ಬಿಡಿ, ಈ ವಿಷಯ ಏನೆಂದರೆ ಜೂನ್ ತಿಂಗಳು ಅಥವಾ ಮಳೆಗಾಲದ ಶಾಲೆ ಬಗ್ಗೆ. ಈ ಸಲವಂತೂ ಶಾಲೆ ಮರೆತು ಹೋಗುವಷ್ಟು ಸುದೀರ್ಘ ರಜೆ ಸಿಕ್ಕಿದೆ. ಮಕ್ಕಳಿಗಿಂತ ದೊಡ್ಡವರಿಗೇ ತಾವೇನು ಕಲಿತೆವೆನ್ನುವ ಕೊಶ್ಚನ್ ಮಾರ್ಕ್ ನೇತಾಡಿದೆ.


ಒಮ್ಮೆ ಹಳೆ ಪಾಠಿ ಚೀಲ, ಬಿಳಿ – ಹಸಿರು ಬಣ್ಣದ Uniform, ಬಣ್ಣದ ಕೊಡೆಗಳತ್ತ ನೋಡೋಣ....ನಾವು ಮರೆಯುವ ಮುನ್ನ ದಾಖಲಾಗಿ ಬಿಡಲಿ ನೆನಪು. ಅಟ್ಟದ ಮೇಲೆ ಇಲಿ ಕಡಿದರೂ, ಪಾಠಿಚೀಲದಲ್ಲಿ ಕಡ್ಡಿ – ಪಾಟಿ ಹಾಗೇ ಉಳಿದಿದೆ. ಮರದ ಕಟ್ಟು, ಪಾಟಿಯ ಮೇಲಿನ ಗೀರು ಮಾಸಿಲ್ಲ. ಅದು ನೆನಪಿನ ಸುರುಳಿಯೊಂದನ್ನು ಎಸೆದಿದೆ.ಆ ಸುರುಳಿ ಬಿಚ್ಚಿಕೊಂಡಾಗ..


ಮಳೆಗಾಲದಲ್ಲಿ ರಾತ್ರಿ ಬೆಚ್ಚಗೆ ಉಂಡು ಮಲಗಿರುತ್ತಿದ್ದ ಸಮಯ. ಆರುವರೆ-ಏಳು ಗಂಟೆಗೆ ಎದ್ದು, ಹಂಡೆಯೊಲೆ ಮುಂದೆ ಮುಕ್ಕಾಲು ತಾಸು ಕುಕ್ಕುರುಗಾಲಿನಲ್ಲಿ ಬೆಂಕಿ ಕಾಯಿಸುತ್ತ ಕಳೆಯುತಿತ್ತು. ೮ ಗಂಟೆಗೆ ಐದು ನಿಮಿಷವಿರುವಾಗ ಅಮ್ಮನ ಅಲ್ರಾಮ್ ಸಿಡಿದಾಗ ಶಾಲೆಗೆ ತಡವಾಯಿತೆಂದು, ಐದೇ ನಿಮಿಷದಲ್ಲಿ ಸ್ನಾನ ಮುಗಿಸಿ ತಯಾರಾಗಿ, ಚಲ್ಲಾಪಿಲ್ಲಿಯಾಗಿದ್ದ ಪಟ್ಟಿಗಳನ್ನು ಪಾಠಿಯನ್ನು ತುರುಕಿಕೊಂಡು ಬಾರುಗಳನ್ನು ಹೆಗಲಿಗೇರಿಸಿ ಟಾಟಾ ಮಾಡಿ, ಸಹಪಾಠಿಗಳ ಸೇರಲು ಅಣಿಯಾದ ಮಳೆಯ ದಿನಗಳವು. ಕೊಡೆ ತಿರುಗಿಸುತ್ತಾ ಒಬ್ಬೊಬ್ಬ ಗೆಳೆಯ/ಗೆಳತಿಯರನ್ನು, ಅಕ್ಕ – ಅಣ್ಣ – ತಮ್ಮಂದಿರನ್ನು ಕೂಡಿಕೊಂಡು ಶಾಲೆಯತ್ತ ನಡೆಯುತ್ತಿದ್ದೆವು. ಬೆಳಗಾದ್ದರಿಂದ ಮಾತು ಕಮ್ಮಿ, ಯಾರೋ ಒಬ್ಬ ಲೇಟಾಗಿ ಗುಂಪು ಸೇರಿದ್ದರಿಂದ ಮತ್ತಷ್ಟು ವೇಗವಾಗಿ ಹೆಜ್ಜೆ ಹಾಕಬೇಕು...ಸಣ್ಣವರು ಚಳ್ಳೆ-ಪಿಳ್ಳೆಗಳು ದೊಡ್ಡವರಂತೆ ಬೇಗ ನಡೆಯಲಾರದೇ ಓಡಿ ಓಡಿ ಸಾಲುಗೂಡುತ್ತಿದ್ದದ್ದು ಎಷ್ಟು ಮೋಜಾಗಿತ್ತು...ಇಂದು ಎಲ್ಲಾ ಚಲ್ಲಾ ಪಿಲ್ಲಿ..ನೀವೆಲ್ಲೋ ನಾವೆಲ್ಲೋ ಎನ್ನುವಂತಾಗಿದೆ.


ಮಳೆಗಾಲದಲ್ಲಿ ಒಂದು ವಿಶೇಷ ಅಂದರೆ ವರಾಂಡದಲ್ಲಿ ಪ್ರರ್ಥನೆ; ‘ಸ್ವಾಮಿ ದೇವನೆ ಲೋಕಪಾಲನೆ ‘. ಒತ್ತಾಗಿ ನಿಂತದ್ದರಿಂದ ಕಿತಾಪತಿಗಳಿಗಳ ಉದ್ಘಾಟನೆಗೆ ಬೆಳಗಿನ ಸುಮುಹೂರ್ತ, ಪ್ರಶಸ್ತ ಸಮಯ. ಎತ್ತರವಿದ್ದವರು ಮುಂದಿನವನ ಬುರುಡೆ ತಟ್ಟಿ , ಅವನು ತೊನೆದಾಗ ಕಿಸಕ್ಕನೆ ನಕ್ಕು ಇಡುವರು. ಆ ಉಸಬರಿ ಬೇಡ. ನೆನೆಸಿಕೊಂಡರೆ ನಗು ಬರುತ್ತದೆ.

ಅನಂತರ ದಿನಂಪೂರ್ತಿ ಶಾಲೆ.

ಶಾಲೆ ಎಷ್ಟೊತ್ತಿಗೆ ಮುಗಿದು ಮನೆ ಸೇರುವೆವೋ ಎಂದು ನಾಲ್ಕು ಗಂಟೆಯ ಹೊತ್ತಿಗಾಗಲೇ ಪಾಠಿಚೀಲ ತುಂಬಿ ಆಸೆಗಣ್ಣಿನ ಗುಬ್ಬಚ್ಚಿಗಳಂತೆ ಕಾದು ಕುಳಿತ ’ಚಿಣ್ಣ’ ನೆನಪು.


ನಾಲ್ಕುವರೆಗೆ ಕೊನೆಗಂಟೆಬಾರಿಸಿ, ಮಕ್ಕಳೆಲ್ಲ ಹೊರಬಿದ್ದೋಡುವರು. ಈಗ ಆಟ ಶುರು ನೋಡಿ,


ಹೋ ಎಂದು ಕೂಗುತ್ತ ಹೆದ್ದರಿ /ರೋಡಿನ ಅಂಚಿಗೆ ಸಾಗುವಾಗ ಒಬ್ಬರಿಗೊಬ್ಬರು ಕೊಡೆ ತಿರುಗಿಸಿ ನೀರು ಸೀರಿಸುತ್ತಾ, ನೀರ ಹೊಂಡದಲ್ಲಿ ಧಡಕ್ಕನೆ ಗುಪ್ಪು ಹಾರಿ ಬದಿ ಬಂದವರ ಬಟ್ಟೆ, ಅಂಗಿ-ಚಡ್ಡಿ ಒದ್ದೆ ಮಾಡುತ್ತ ಸಾಗಿದ್ದು. ಜೋರು ಮಳೆಯಾದಾಗಲೂ ಕೊಡೆ ತರದ ಪುಟಣಿ ಪುಣ್ಯಾತ್ಮನೂ ಸೇರಿ, ತನ್ನ ಕೊಡೆ ಒದ್ದೆಯಾಗಬಾರದೆಂದು ಬ್ಯಾಗಲ್ಲೇ ಅಡಗಿಸಿಟ್ಟುಕೊಂಡ ಚಾಲಾಕಿಯೂ, ಒಬ್ಬ ಬೊಳೇ ಶಂಕರನಿಗೆ ಪುಸಲಾಯಿಸಿ ಮೂರೂ ಜನ ಒಂದೇ ಕೊಡೆಯಲ್ಲಿ ಹೊಕ್ಕು.. ಅಷ್ಟೂ ಜನ ಒಂದು ಬದಿಗೆ ನೆನೆದು, ಆದರೂ ಪಾಟೀಚೀಲ ಒದ್ದೆಯಾಗಲು ಬಿಡದೇ ಬೆಚ್ಚಗಿರಿಸಿ ಜೋಪಾನ ಮಾಡಿ ಕಾಪಾಡಿಕೊಂಡ ಮೌಲ್ಯವದರೋ ಅನುಕರಣೀಯ, ಮನನೀಯ.


ಇನ್ನು ಆ ಸಂದರ್ಭದಲ್ಲಿ ಕರೀ ಟಾರು ರೋಡುಗಳು ಹೊಂಡ ಬಿದ್ದಿರುತಿದ್ದವು. ಕೆಲವು ಹೊಂಡಗಳಂತೂ ಒಂದು ಸೊರಟಿ ಎಮ್ಮೆ ಆರಾಮಾಗಿ ಕಾಲ ಚಾಚಿ ಮಲಗುವಷ್ಟು ದೊಡ್ಡವು. ಕೆಂಪು ಬಸ್ಸೊಂದು ಬುರ್ರೆಂದು ಧೂಮ ಬಿಡುತ್ತ ಬಂದಾಗ ಸಾಲು ಸಾಲಾಗಿ ಗುಂಪಾಗಿ ನಿಂತಿದ್ದ ಚಿಲ್ಟಾರಿ ನಾವುಗಳು ಮೈ ನೆನೆಯದಿರಲೆಂದು ಕೊಡೆ ಅಡ್ದ ಹಿಡಿದು ನಿಂತರೆ, ಆ ಬಸ್ಸಿನ ವೇಗಕ್ಕೆ ಟೈರು ದಡಾಲ್ಲನೆ ಹೊಂಡ ದಾಟುತ್ತಿತ್ತು. ಆಗ ಹೊಂಡದಲ್ಲಿನ ಕೇಸರಿ ನೀರು ಮೇಲಿನಿಂದ ಹಾರಿ ತಲೆ-ಮೈ ಮೇಲೆ ಬಿದ್ದು..ಬಿಳಿಯಂಗಿಯ ನಾವೆಲ್ಲ ಕೇಸರೀಕರಣ ಆದದ್ದಿದೆ.. ಇದಂತೂ ಅಚ್ಚಳಿಯದ ನೂರೊಂದು ನೆನಪುಗಳಲ್ಲೊಂದು.


ಡಾಂಬರು ರಸ್ತೆಯಲ್ಲಿ ಬಿದ್ದು ಪುಟಿಯುವ ಹನಿಗಳನ್ನು ಜೋರುಮಳೆಯಲ್ಲಿ ನೋಡುವುದು ಒಂದು ಸುಂದರ ಅನುಭೂತಿ, ಹಾಗೇ ಕೊಡೆ ಹಿಡಿದು ನಡೆಯುವುದೂ ಸಹ.


ಅದೇ ಮಣ್ಣು ರೋಡು ಇಳಿದವೆಂದರೆ, ಹೇಳತೀರದು..ಅಲವರಿಕೆಯ ವಿಷಯ ಅದು. ಊರದನಗಳು ನಡೆದು ರಾಡಿ ಮಾಡಿದ ಹಾದಿ, ಅವು ಹಾಕಿದ ಸಗಣಿ, ಕಾಲುವೆ ಅಳಿದ ರಸ್ತೆಯಲ್ಲಿ ಸೇರಿಕೊಂಡ ಮೊಳಕೆ ಒಡೆದ ಮಾವಿನ ವರ್ಟೆ, ಚಿಗುರಿದ ಹಲಸಿನ ಬೀಜ,, ಹೊಳಗೇರಿ ಹಣ್ಣು, ಇನ್ನಿತರ ಎಲೆ-ಕಸ-ಕಡ್ಡಿ-ಕೋಲು-ಕೊಕ್ಕರು, ಕೆಲವೊಮ್ಮೆ ,ಗೊಬ್ಬರ ಗುಂಡಿಯ ನೀರು ದಾರಿಯ ಮೇಲೇ ಹರಿದು ಹೇಸಿಗೆ, ಮೂಗು ಬಿಡಲಾಗದ ಗಬ್ಬು ನಾತ,ಗಂಟಲು ಕಟ್ಟಿ, ಹಾಗಲಕಾಯಿ ಮೂತಿ ಮಾಡಿಕೊಂಡು “ಯಪ್ಪಾ.. ಇಲ್ಲಿ ದಾಟಿಹೋದರೆ ಸಾಕು“ ಎಂದೆನಿಸಿ ಬಿಡುತ್ತಿತ್ತು..


ಅಲ್ಲಿ ಎಚ್ಚರಿಕೆಯಿಂದ ಹುಶಾರಾಗಿ ಕಾಲೆತ್ತರಿಸಿ ತುದಿಗಾಲಿನಲ್ಲಿ ಗಲೀಜಿಲ್ಲದ ಖಾಲಿ ಜಾಗ ನೋಡಿಕೊಂದು ಹರ ಸಾಹಸವೊಂದು ಮುಗಿದ ನಿಟ್ಟುಸಿರು. ಆ ಶಾಲೆಗೆ ಹೋಗುವ ದಿನಗಳನ್ನು ನಾವು ನೆನೆದಾಗ..ಈಗಲೂ ಮೈ ಒಂಥರಾ ಜುಮುಗುಡುತ್ತದೆ.. ಸುಖ ಸೌಂದರ್ಯದ ಜೊತೆ ಅಸಹನೀಯತೆಗಳೂ ಇದ್ದವೆಂಬುದನ್ನು ಕೆಲ ಸರತಿ ಮರೆಯಬಾರದಲ್ಲ...ಅದನ್ನು ದಾಟಿಯಾಯಿತಲ್ಲ.. ಬಿಡಿ.


ಮುಂದೆ, ಕಡಿ ರೋಡಿನ ಕಲ್ಲಿನ ಮೇಲೆ ಕುಂಟೆಬಿಲ್ಲೆ ತರಹ ಹಾರು ಹಾರುತ್ತಾ, ಶಾಲೆಯಲ್ಲಿ ಅಂದು ಕಲಿಸಿದ ಹಾಡು ಹಾಡುತ್ತಾ ಆ ಥಂಡಿಯಲ್ಲಿ ಬ್ಯಗಿನ ಬರನ್ನು ಮತ್ತಷ್ಟು ಬಿಗಿ ಮಾಡಿ ಕೈಕಟ್ಟಿ ಮುದುಡಿ ನಡೆದ ದಿನ ಮತ್ತೆ ಮರೆತೇ ಹೋಗಿತ್ತು..


ಏನೇ ಇರಲಿ, I Thank for those rainy moments..


ಸಹಸ್ರಪದಿ, ಬೆಳ್ಳೇಡಿಗಳು ಓಡಾಡುವ ಸಮಯ ಕೊಂಬು ಅಗಲಿಸಿ ಬರುವ ಏಡಿಗಳಿಗೆ ಹೆದರಿ ಬದಿ ಸರಿದು ನಿಲ್ಲುವಂತಾಗಿತ್ತು ಅಂದು. ಆಷಾಢ, ಆರಿದ್ರೆ ಮಳೆಯ ವೇಳೆ ಕೊಳೆ ಎಲ್ಲವೂ ತೊಳೆದು ಶುಭ್ರ ನೀರು ಎಲ್ಲೆಲ್ಲೂ ಹರಿಯುತ್ತಿತ್ತು..ಅದೊಂದು ಸೊಬಗು.. ಪಕ್ಕದ ಬೆಟ್ಟದ ಧರೆಯ ಕಿರುಜಲಧಾರೆ, ಮಿನಿ ಫಾಲ್ಸ್ ಗಳು ಅಲ್ಲಲ್ಲಿ ಹರಿದು ಹೋಗುವ ಸುಂದರ ದೃಶ್ಯ. ಶುಭ್ರ ನೀರಿನಲ್ಲಿ ಕಲೆಯುತ್ತಾ ನಡೆದಾಗ ಕಾಲುಗಳು ಚೊಕ್ಕವಾಗಿರುತ್ತಿದ್ದವು.


ಇನ್ನು, ಮಳೆಗಾಲದಲ್ಲಿ ಬಿಡುವ ಹಣ್ಣೆಂದರೆ ಚಳ್ಳೆ ಹಣ್ಣು.

ಆ ದಿನ ಶಾಲೆಯಿಂದ ಬರುವಾಗ ಒಂದು ಸಣ್ಣ ಹಸಿರಾದ ಮರದಲ್ಲಿ ಕಡಲೆಕಾಳಿನ ಗಾತ್ರದ ಹಳದಿ ಅರೆಪಾರದರ್ಶಕವಾದ ಸಳ್ಳೆ ಹಣ್ಣುಗಳು ತುಂಬಿ ಕಣ್ಣು ಸೆಳೆದವು. ಆಗ ಮಳೆ ನಿಂತಿತ್ತು. ಆದರೂ ಮಳೆಯ ಹನಿ ಹುಂಡು ತಲೆಯ ಮೇಲೆ ಬೀಳದಿರಲಿ ಎಂದು ಕೊಡೆ ಬಿಡಿಸಿಕೊಂಡೆ ಹೋಗುತ್ತಿದ್ದ ನಾನು, ಬಿಡಿಸಿದ ಕೊಡೆ ಅಲ್ಲೇ ಇಟ್ಟು, ಹೆಗಲಿನಿಂದ ಪಾಠಿಚೀಲ ಇಳಿಸಿ ಮರವೇರಿ, ಹಣ್ಣು ಕೊಯ್ಯತೊಡಗಿದೆ. ಬಿಳಿ ಅಂಗಿಯ ಮೇಲಿನ ಕಿಸೆ ತುಂಬಿಸಿಕೊಂಡು, ಮಧ್ಯೆ ಮಧ್ಯೆ ಹಣ್ಣುಗಳನ್ನು ಬಾಯಿಗೆಸೆದುಕೊಂಡು ಎಲ್ಲಾ ಕಿಸೆಗಳನ್ನೂ ಭರ್ತಿ ಮಾಡುವಷ್ಟು ಹೊತ್ತಿಗೆ ಸುಮಾರು ಹೊತ್ತಾಗಿತ್ತು. ಮನೆ ಎಂಬುದು ಇದೆ ಎಂದು ನೆನಪಾಗಿ, ನಾಳೆ ಶಾಲೆಗೆ ಮತ್ತೆ ಹೋಗಬೇಕು ಅದಕ್ಕಾಗಿ ಒಂದಷ್ಟು ಬರೆದು ಮುಗಿಸಬೇಕೆಂಬುದು ಅರಿವಿಗೆ ಬಂದು ಲಗುಬಗೆಯಿಂದ ಮರವಿಳಿದೆ. ಬ್ಯಾಗು ಏರಿಸಿದ ನಂತರ ಓಡಿಯೇ ಮನೆ ಸೇರಿದ್ದು.


ಮನೆಗೆ ಬಂದು ಸೇರಿದ ಮೇಲೆ ಅಪ್ಪ ಕೇಳಿದಾಗಲೇ ನೆನಪಾಗಿದ್ದು ಕೊಡೆ ಎಲ್ಲಿ ಹೋಯಿತು ಎಂದು. ಸಣ್ಣ ಮುಖ ಮಾಡಿ ಇದ್ದ ವಿಷಯ ಹೇಳಿಯಾಯಿತು. ಹೋಗಿ ನೋಡಿದ್ದೂ ಆಯಿತು.ಮರದ ಬುಡದಲ್ಲಿ ಇದ್ದ ಕೊಡೆ ಗಾಳಿಗೆ ಹಾರಿ ಹೋಗಿತ್ತು.. ಅದು ಯಾರೋ ಕೈಗೆ ಸಿಕ್ಕಿರಲೂ ಸಾಕು. ಅಂತೂ ಆ ಹೊಸ ಕೊಡೆ ನಮ್ಮ ಪಾಲಿಗೆ ನಾಸ್ತಿಯಾಯಿತು.


ನಾನು ಚಳ್ಳೆ ಹಣ್ಣು ತಿಂದೆ. ತಲೆಕೆಡಿಸಿಕೊಳ್ಲಲಿಲ್ಲ.


ಆಗಾಗ ಮಳೆಗಾಲದಲ್ಲಿ ಕಳೆದ ಕೊಡೆ ನೆನೆಪಾಗುತ್ತದೆ. ಹೀಗೆ ಕಳೆದುಕೊಂಡದ್ದರ ಪಟ್ಟಿಯೇ ಇದೆ..ಬಿಡಿ. ಒಟ್ಟಿನಲ್ಲಿ ಕಳೆದಿದ್ದು, ಮರೆತದ್ದು ನೆನಪಿನಿಂದ ಮರೆಯಾಗುವುದಿಲ್ಲ. ಆಗಾಗ ಸಿಗದಿರುವುದೇ ಹಾಗೆ ಮತ್ತೆ ಮತ್ತೆ ನೆನಪಾಗಿ ಕಾಡುವುದು...


ಯಾವಾಗಲೂ ಹಾಗೇ ಇದ್ದವರು, ಇದ್ದದ್ದು ಏನೂ ಅನಿಸದು, ಕಳೆದುಕೊಂಡಿದ್ದು, ಇಲ್ಲದ್ದು ಬಹುವಾಗಿ ಕಾಡುವುದು..


ಕಳೆದ , ಇರದ ಮಳೆಗಾಲದ ನೆನಪು. ನನಗಂತೂ ಕಾಡಿದೆ. ನಿಮಗೂ ಕಾಡಿರಬಹುದು..


ಹಾಂ, ಇನ್ನೊಂದು ಮರೆತಿದ್ದೆ. ಅದು ಮಳೆಗಾಲದ ಅಮೋಘ ಸ್ನಾನ. ಭಾನುವಾರದ ಮೀಯುವಣಿಕೆ. ಜೋರು ಮಳೆಯಲ್ಲಿ ಒಂದು ಹಂಡೆ ಬಿಸಿ ಬಿಸಿ ನೀರನ್ನು ತಾಸುಗಟ್ಟಲೇ ಹೊಯ್ದುಕೊಂಡ ಮಲೆನಾಡಿಗರ ಆ ಅನುಭೂತಿಗಳು ಈಗೆಲ್ಲಿಂದ ಬರಬೇಕು. ಅದರಲ್ಲೂ ಚಿಕ್ಕವರಿದ್ದಾಗ ದೊಡ್ಡವರು ಹೂಬಿಸಿ, ಕಟ್ಟಗಿನ ನೀರನ್ನು ಅಜ್ಜಿಯೋ ಅಮ್ಮನೋ ಧಾರೆಯಾಗಿ ಅಭಿಷೇಕದಂತೆ ನೀರೆರೆದಾಗ ಬಾಲ್ಯದ ದೇಹ-ಮನಸ್ಸು ಅದೆಷ್ಟು ಖುಷಿಪಟ್ಟಿತ್ತು.. ಸುಖಪಟ್ಟಿತ್ತು..!! ಅದಕ್ಕೆ ಅನಿಸುತ್ತದೆ ಮುಗ್ಧ ಮನಸ್ಸಿನ ಶಿವ, ಅಭಿಷೇಕಪ್ರಿಯನಾಗಿರಬೇಕು ಎಂದು..


ಕೊನೆಯ ಹನಿ :

ಮರಳಿ ಬಾ ಮತ್ತೆ ಮಳೆಯ ಮಧುರ ನೆನಪೇ ..

ಕಳೆದು ಮನದೆಲ್ಲ ಕೊಳೆ ಮಿರುಗು ಹೊಳಪೇ..

- ಮಹೇಂದ್ರ ಸಂಕಿಮನೆ

247 views0 comments

Recent Posts

See All

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ. ಇಂದು ದುಡ್ಡು ಎಲ್ಲರ ಬಳಿ

Post: Blog2_Post
bottom of page