top of page
  • Writer's pictureಮಹೇಂದ್ರ ಸಂಕಿಮನೆ

"ಆಲೆಮನೆಯ ಮೋಹ"

Updated: Feb 15, 2020

ಆಲೆಮನೆ ; "ಇಟ್ ಈಸ್ ನಾಟ್ ಎ ವರ್ಡ್ ಆರ್ ಬ್ರ್ಯಾಂಡ್, ಇಟ್ ಈಸ್ ಎಮೋಶನ್."

ಆಲೆಮನೆ ಹೆಸರೆ ಎಷ್ಟೋ ಜನರನ್ನು ಹುರಿದುಂಬಿಸುತ್ತದೆ. ಅಂತಹ ಆಲೆಮನೆಯ ಕ್ಷಣವನ್ನು ಅನುಭವಿಸಲೇಬೇಕು. ಹಂಚಲೇಬೇಕು.


ಆಲೆಮನೆಯ ಹಂಗಾಮು ಶುರು ಆಗಿತ್ತು. ಪ್ರತಿವರ್ಷ ಎಲ್ಲಾದರೂ ಒಂದು ಆಲೆಮನೆಯ ಆಹ್ವಾನ ಬರುತ್ತಿತ್ತು. ಜೊತೆ ಮಿತ್ರರು ಸೇರಿ ಹೋಗಿ ಬರುವುದು. ಈ ಸರತಿ ಒಂದು ಕರೆಯವೂ ಇಲ್ಲ. ಯಾರೂ ಇಲ್ಲ. ಅರೆ !! ಹಳ್ಳಿ ಕಡೇ ಇದ್ದೂ ಇದೆಂತ ಬದುಕಾಯಿತು..ಎಂದು ನನಗೆ ಅನಿಸಿತ್ತು. ಏಕೆಂದರೆ ಆಲೆಮನೆಯ ಆ ವ್ಯವಸ್ಥೆ, ಗದ್ದೆ ಬಯಲಿನ ಸೋಗೆ ಚಪ್ಪರ, ಕಣೆ, ಕಬ್ಬಿನ ಹೊರೆಗಳ ಕಟ್ಟು, ಕಬ್ಬಿನ ಸಿಪ್ಪೆಯ ರಾಶಿ, ಆಲೆ ಒಲೆ , ಬುಬುಗು ಕತ್ತುರಿವ ಬೆಂಕಿ ತುಂಡು, ಕೊಪ್ಪರಿಗೆ, ಬೆಲ್ಲದ ಘಮಲು, ನೊರೆಬೆಲ್ಲ, ಬೆಲ್ಲದ ಡಬ್ಬಿ ಕ್ಯಾನುಗಳು, ಹಾಲಿನ ಬಾನಿ ..ಅದೊಂದು 'ಆಲೆಲೋಕ' ಇದು ಒಂದು ಶಬ್ದ ಮಾತ್ರವಲ್ಲ ಇದು ಅಮೂಲ್ಯ ಭಾವನೆ . ಡೊಂಕು ಸಿಹಿಯಾಗುವ ಪರಿ ವೈಖರಿ. ವಾರ್ಷಿಕವಾಗಿ ಒಮ್ಮೆ ಪ್ರಕ್ರಿಯೆ ನೋಡದಿದ್ದರೆ ಮನಸು ಕೇಳುವುದಿಲ್ಲ. ಕಬ್ಬಿನ ಹಾಲು ಈಗ ಸಾರ್ವಕಾಲಿಕವಾಗಿ ಕಿಮ್ಮತ್ತು ಕಳಕೊಂಡಿದೆ. ಆದರೆ ಅಲೆಮನೆಯ ಗಮ್ಮತ್ತೇ ಬೇರೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಆತ್ಮೀಯ ನಾಗರಾಜ ಬರೂರು, ಆಲೆಮನೆಯ ಚಿತ್ರ ಹಾಕಿದ್ದು ಕಂಡು ವಿಚಾರಿಸಿದೆ. ಅದೇ ವಾರದಲ್ಲಿ ಬಾಂಬೆ ಬೆಂಗಳೂರುನಿಂದ ಬಂದ ಮಿತ್ರರಿದ್ದ ಕಾರಣ ಜೊತೆಯೂ ಆಯಿತು ಎಂದು. ಅವತ್ತೇ ಮಿತ್ರರಿಗೆ ಹೊರಡಬೇಕಾದ್ದರಿಂದ ನಾನು ಮತ್ತೆ ಒಬ್ಬನೇ ಹೋಗುವ ಪ್ರಸಂಗ ಬಂತು. ಸಂಜೆ ವೇಳೆ ಏಳು ಗಂಟೆಗೆ ನಾನು ಅಲ್ಲಿ ತಲುಪಿದೆ. ಆತ ಮನೆಗೆ ಆತ್ಮೀಯವಾಗಿ ಬರಮಾಡಿಕೊಂಡ‌.


ನಾಗರಾಜನ ಬಗ್ಗೆ ಹೇಳಲೇಬೇಕು..ಪ್ರಸ್ತುತ ಜೀ ಕನ್ನಡದ ಉಘೇ ಉಘೇ ಮಾದೇಶ್ವರ ಧಾರಾವಾಹಿಯ ಕನ್ನಯ್ಯನ ಪಾತ್ರದಲ್ಲಿ ನಟಿಸುತ್ತಿರುವವ. ಹೆಗ್ಗೋಡಿನ ನೀನಾಸಂ ನಲ್ಲಿ ಪಳಗಿ ಬಹಳಷ್ಟು ರಂಗ ಪ್ರದರ್ಶನ ನೀಡಿದ ಅನುಭವ ಹೊಂದಿದ ಉತ್ಸಾಹಿ ಯುವಕ. ಅವರ ಕುರುಕ್ಷೇತ್ರ ಎಂಬ ನಾಟಕ ಅಪಾರ ಮನ್ನಣೆ ಗಳಿಸಿದೆ. ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ ಕೂಡ ಮಾಡಿದಂತಹನು. ಪಿಯುಸಿಯಿಂದಲೂ ಅನುಕರಣೆ ಮಿಮಿಕ್ರಿ ಒಲವು ಹೊಂದಿ ರಂಗಸಜ್ಜಿಕೆಯ ಮೂಲಕ ಕಿರುತೆರೆ ಪ್ರವೇಶಿಸಿದರೂ ಸಹ ಮಣ್ಣಿನಲ್ಲಿ ಆಸಕ್ತಿ ಶ್ರಧ್ದೆ ಹಾಗೂ ಸಹವಾಸ ಇಟ್ಟುಕೊಂಡಿರುವ ವಿಶೇಷ ವ್ಯಕ್ತಿ.

ಒಮ್ಮೆ ಆಲೆಮನೆ ನೋಡಿ ಬರುವ ಎಂದು ಹೇಳಿದಾಗ ..ಗದ್ದೆ ಹಾಳೆಯ ಮೇಲೆ ನಡೆದು ಆಲೆಮನೆ ನೋಡಿ ಗತವನ್ನು ಉಜ್ಜೀವಿಸಿಕೊಂಡೆ. ಇಂದು ಯಂತ್ರಗಳು ಸ್ಥಾಪಿತವಾಗಿವೆ. ಕಬ್ಬು ಕೊಟ್ಟರಾಯಿತು. ಕಣೆ ಕಬ್ಬು ನುರಿದು ಬಾನಿ ತುಂಬ ಹಾಲು ತುಂಬಿಸುತ್ತಿತ್ತು.


ತಾಜಾ ಹಾಲು ಮಾಡಿಕೊಡುವ ಸಲುವಾಗಿ ಆ ಕತ್ತಲ ಸಮಯದಲ್ಲೇ ಕಬ್ಬಿನ ಗದ್ದೆಗೆ ನಾಗರಾಜ (ಕೊಂಚ ಅನಾರೋಗ್ಯದ ನಡುವೆಯೂ) ನನ್ನನ್ನು ಕರೆದುಕೊಂಡು ಹೋಗಿ ಕಬ್ಬಿನ ಸುತ್ತು (ರವದಿ ) ಬಿಡಿಸಿ ಕಡಿದು ಅದರಿಂದ ಹಾಲು ಮಾಡಿಸಿ ಕೊಡುವ ವಿಶೇಷ ಮುತುವರ್ಜಿ ವಹಿಸಿದ.

ಅಲ್ಲಿ ಜೋಡು ಆಲೆಮನೆ ಇತ್ತು. ಮತ್ತೊಂದು ಕಡೆ ಹೋಗಿ ನೋಡಿದಾಗ ಕೊಪ್ಪರಿಗೆ ಬೆಲ್ಲ ಕುದಿ ಬರುತ್ತಿತ್ತು. ಅವರ ಮನೆಯ ಆಲೆಮನೆ ಮುಗಿದಿತ್ತು. ಆದರೂ ನನ್ನ ಸಲುವಾಗಿ ಕಬ್ಬು ಉಳಿಸಿಕೊಂಡಿದ್ದ. ಒಳ್ಳೆಯ ಕೋಣನ ಕಟ್ಟೆಯ ಕಬ್ಬು, ಹಾಲು ತುಂಬಾ ಸಿಹಿಯಾಗಿತ್ತು. ಕುಡಿದು ನಿಜವಾಗಿಯೂ ಮನಸು ತುಂಬಿತು. ಅಂತಹ ಕಾರ್ಯಕ್ಕೆ ಎರಡು ಪ್ರಶಂಸಾತ್ಮಕ ಮಾತು ಬರೆಯಲೇಬೇಕೆನಿಸಿತು. ಈ ಬರಹ ಅಂತಹ ಕೃತಜ್ಞತೆಯ ಕುರುಹು ಮಾತ್ರ.

ಮನೆಗೆ ಬರುವಾಗ ಒಂದಷ್ಟು ಹಿಂದಣ ನೆನಪು ಗಳು ಮನದಲ್ಲಿ ಮೂಡಿದವು.. ನಿಮಗೂ ಕೂಡ ನೆನಪಾಗಬಹುದೇನೋ..?!


ಅಂದು ಕೋಣಗಳನ್ನು ಹೂಡಿ ಮುಂಜಾನೆ ಮತ್ತು ಸಂಜೆ ತಂಪು ಹೊತ್ತಿನಲ್ಲಿ ಹಾಲು ಮಾಡುತ್ತಿದ್ದು ತಿಂಗಾಳಾನುಗಟ್ಟಲೆ ಅಲೆಮನೆ ನಡೆಯುತ್ತಿತ್ತು. ಬಾಲ್ಯದ ಆಲೆಮನೆ ಕಬ್ಬಿನಗದ್ದೆಯ ನೆನಪು ಇನ್ನೂ ಹಸಿರಾಗಿದೆ. ನಮ್ಮ ಮನೆಯದೇ ಕಬ್ಬು ಕದ್ದು ಹಂಚಿ ತಿಂದದ್ದೂ ಇದೆ. ಆಲೆ ಕೋಣಗಳನ್ನು ಬೆರಸುವ ಚಿಕ್ಕಂದಿನ ಆ ಅವಸರ ಈಗ ಇಲ್ಲ. ಅಲ್ಲದೇ ಬಾಲ್ಯದ ಗೆಳೆಯರನ್ನು ಕರೆದು ಆಲೆಮನೆ ಎಂದು ಬೀಗಿದ್ದು ಈಗ ಮಧುರ ನೆನಪು ಮಾತ್ರ. ಹ್ಞಾಂ ...ಹಾಗೆ ಒಮ್ಮೆ ಶಾಲೆಯ ಪಿಕ್ನಿಕ್ಕಿಗೆ ಕಬ್ಬಿನ ಹೋಳುಗಳನ್ನು ತಿಂಡಿ ಡಬ್ಬದಲ್ಲಿ ತುಂಬಿಕೊಂಡು ಹೋದಾಗ ಗೆಳೆಯರು ಮುಗಿಬಿದ್ದ ಸಂದರ್ಭ ಈಗಲೂ ಎದೆಯುಬ್ಬಿಸುತ್ತದೆ. ಅದರ ನೆನಪಿಗಾದರೂ ಇರಲಿ ಎಂದು ಎರಡು ಕಬ್ಬುಗಳು ಹಿತ್ತಲಿನಲ್ಲಿ ಈಗ ಉಂಟು.


ಆಲೆಮನೆಯ ಬೆಲ್ಲ ತಿನ್ನುವ ಸಂಭ್ರಮ ಬೇರೆ. ಅಲ್ಲಿಯೇ ಸಮೀಪದ ಕೌಲ ಮರವೊಂದರ ದೊಡ್ಡ ಎಲೆಯ ಕೊಟ್ಟೆ ಮಾಡಿ ಬಿಸಿ ಬಿಸಿ ಬೆಲ್ಲ ತಿನ್ನಲು ಹಾತೊರೆಯುತ್ತಿದ್ದೆವು. ಗಟ್ಟಿ ಪಾಕವಾಗಿ ತಣಿದ ಬೆಲ್ಲದ ಹಲ್ಪೆಯಂತೂ ಬಾಯಲ್ಲಿ ಇಡಲೂ ತುಂಬಾ ಸೊಗಸಾಗಿರುತ್ತದೆ. ಮರಳು ಮರಳಾಗಿದ್ದು ಕ್ರಿಸ್ಪಿ ಎನ್ನಬಹುದು.

ಬಲ್ಲವನೇ ಬಲ್ಲ ಬೆಲ್ಲದ ರುಚಿಯ :

ಅತಿಯಾಗಿ ಬೆಲ್ಲ ತಿನ್ನುವ ಸಿಹಿ ಪ್ರಿಯರನ್ನು 'ಬೆಲ್ಲದ ಗೊದ್ದ' ಎನ್ನುವ ವಾಡಿಕೆ ಇದೆ. ಬೆಲ್ಲ ಕಬ್ಬಿಣಾಂಶ ಹೇರಳವಾಗಿ ಹೊಂದಿರುವ ಖನಿ. ರಕ್ತಹೀನತೆಯಿಂದ ಬಳಲುವವರಿಗೆ ದಿವ್ಯೌಷಧಿ. ಉತ್ತರ ಕನ್ನಡದ ಕೆಲ ಪ್ರದೇಶಗಳಲ್ಲಿ ಮುಂಜಾನೆಯ ಉಪಾಹಾರದ ಮುಖ್ಯ ಭಾಗ ಬೆಲ್ಲ-ತುಪ್ಪ. ಹಾಗಾಗೇಎ ಆಪ್ತ ಸ್ನೇಹಿತರನ್ನು ಬೆಲ್ಲ ತುಪ್ಪದಂತೆ ಎಂದು ಉಪಮಿಸಬಹುದು ಎಂಬುದು ಸ್ಥಳಿಯ ಕಾಳಿದಾಸೋಕ್ತಿ.


ಇನ್ನೂ ಹಳೆಯ ಕಾಲದಲ್ಲಿ ಬೆಲ್ಲ ಕೇವಲ ತಿನ್ನುವ ಪದಾರ್ಥ ಆಗಿರದೇ ಕಟ್ಟಡ ಕಟ್ಟುವ ಗಾರೆಯ ಪ್ರಮುಖ ಮಿಶ್ರವಾಗಿತ್ತು. ಸುಣ್ಣ -ಗಾರೆ -ಬೆಲ್ಲದಲ್ಲಿ ಕೋಟೆ ಕೊತ್ತಲಗಳೇ ನಿರ್ಮಿತವಾಗಿ ಇನ್ನೂ ಕೂಡ ಭದ್ರವಾಗಿರುವ ಪುರಾವೆಗಳಿವೆ. ಸಂಸ್ಕ ತದಲ್ಲಿ ಬೆಲ್ಲಕ್ಕೆ 'ಗುಡ' ಎನ್ನುವರು. ದೇವರ ಅಭಿಷೇಕದಲ್ಲಿಯೂ ಸಹ "ಗುಡೋದಕೇನ ಸ್ನಾಪಯಿಷ್ಯೇ" ಎಂದು ಅಭಿಷೇಕ ಸಹ ಮಾಡುವುದುಂಟು. ಯುಗಾದಿಗೆ ಬೇವು ಬೆಲ್ಲ ಬೇಕು. ನಮ್ಮ ಭಾಗದ ಸಿಹಿ ತಿನಿಸುಗಳಲ್ಲಿ ಸಕ್ಕರೆ ಪ್ರವೇಶಿಸಿದ್ದು ಇತ್ತೀಚೆಗೆ. ಕೆಲ ಪಾಯಸಾದಿ ಭಕ್ಷ್ಯ ಗಳಲ್ಲಿ ಬೆಲ್ಲಕ್ಕೆ ಸಕ್ಕರೆ ಸಮವಾಗಿ ನಿಲ್ಲವುದಿಲ್ಲ ಎನ್ನುತ್ತಾರೆ ಹಿರಿಯರು. ಇನ್ನು ಆಲೆಮನೆಯಲ್ಲಿ ಬೆಲ್ಲದ ಪಾಕ ಹಿಡಿಯುವುದು ಬಹಳ ಮುಖ್ಯ ಘಟ್ಟ. ಹಿರಿಯ ಅನುಭವಿಗಳೇ ಬೇಕು. ಒಲೆಯ ಮೇಲಿನಿಂದ ಇಳಿಸುವ ಸಮಯ ಕೊಂಚ ವ್ಯತ್ಯಾಸ ಆದರೂ ಪಾಕ ಹೆಚ್ಚು ಕಡಿಮೆ ಆಗಿ ವರ್ಷದ ಸಂಪೂರ್ಣ ಯೋಜನೆ ತಲೆಕೆಳಗಾಗಿ ಬಿಡುತ್ತದೆ. ಈ ಸಂದರ್ಭವನ್ನು ಎಚ್ಚರದಿಂದ ನಿರ್ವಹಿಸಬೇಕು. ಬೆಲ್ಲವನ್ನು ಕಾಕಂಬಿ, ಜೋನಿ, ಗಟ್ಟಿ, ದೋಸಿಹಿಟ್ಟಿನ ಹದ, ನೊರೆಬೆಲ್ಲ ಎಂದು ವಿಂಗಡಿಸುವುದುಂಟು. ಅಗತ್ಯ ಮತ್ತು ಬೇಡಿಕೆಗೆ ತಕ್ಕಂತೆ ಸಂಗ್ರಹ ಮಾಡಿಕೊಳ್ಳಲಾಗುತ್ತದೆ.

ಕಬ್ಬು ಡೊಂಕಾದರೆ..

ಬಹಳ ಸಲ ಹಾಲು ಕುಡಿದವರಿಗೆ ಕಬ್ಬು ಇಲ್ಲ ಎಂದು ತಾಕೀತು ಮಾಡುತ್ತಿದ್ದರು. ಆದರೇ ಕಬ್ಬು ತಿನ್ನುವ ಮಜವೇ ಬೇರೆ . ಕಾಡಿ ಬೇಡಿದಾಗ ಆರು ಗೇಣಿನ ಕಬ್ಬು ಸಿಕ್ಕಿತೆಂದರೆ ಸ್ವರ್ಗಕ್ಕೆ ಮೂರೇ ಗೇಣು.

ಮಾರುದ್ದದ ಕಬ್ಬು ಹಿಡಿದು ಸಿಗಿ ಸಿಗಿದು ಸೀಬಿ ಜಗಿದು ತಿನ್ನುತ್ತ ಮನೆಗೆ ಬರುವ ದಾರಿ ಸಾಗುತ್ತಿತ್ತು. ದೊಡ್ಡವರು ಕಬ್ಬು ತಿಂದ ಮೇಲೆ ತೇಗು ಬರದಿದ್ದರೆ ತಿಂದಷ್ಟೂ ಕಬ್ಬಿನ ರಸ ರಕ್ತವಾಗಿ ಬದಲಾಗುತ್ತದೆ ಎನ್ನುತ್ತಿದ್ದರು. ಆದರೆ ಕಬ್ಬು ತಿಂದರೆ ತೇಗು ಬಂದೇ ಬರುವುದು. ಕಬ್ಬು ತಿಂದ ಆನಂತರ ಕಟಬಾಯಿ ಒಡೆದು ನೋಯುತ್ತಿದ್ದ ಮಾತು ಬೇರೆ.


ಆಲೆಮನೆ ಬೆಲ್ಲ ಕಬ್ಬು ಮಾಡುವ ಬಗೆ ಇದರ ಸುದ್ದಿಯೇ ತುಂಬಾ ಇದೆ. ಇವುಗಳ ಬಗ್ಗೆ ಇರುವ ಮಾತು ಕಥೆ ಅನುಭವ ವದಂತಿಗಳು ಎಂದೂ ಮುಗಿಯದವು. ಇರಲಿ ಬಿಡಿ.

ಇಂದು ಆಲೆಮನೆ ಹಬ್ಬ ಸಮಾರಂಭ ಬಹಳಷ್ಟು ಪ್ರಯತ್ನ ಪ್ರಯೋಗ ನಡೆಯುತ್ತಿದೆ ಒಳ್ಳೆಯದು. ಶ್ಲಾಘನೀಯ. ಕಾಲಾನುಗುಣವಾಗಿ ಪಾರಂಪರಿಕ ಆತ್ಮೀಯತೆ ಈ ಆಧುನಿಕತೆಯಲ್ಲಿ ಮರೆಯಾಗಿದೆ. ಅಲ್ಲಲ್ಲಿ ಅವಶೇಷದಂತೆ ಉಳಿದ ಕೆಲ ಆತ್ಮೀಯ ಅನುಭೂತಿಗಳು ನಿಜವಾಗಿಯೂ ಹೃದಯಸ್ಪರ್ಶಿಯಾಗಿಬಿಡುತ್ತವೆ ಅಲ್ಲವೇ? ಏನೆನ್ನುತ್ತೀರಿ?


-ಮಹೇಂದ್ರ ಸಂಕೀಮನೆ

33 views0 comments

Recent Posts

See All

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ. ಇಂದು ದುಡ್ಡು ಎಲ್ಲರ ಬಳಿ

Post: Blog2_Post
bottom of page