"ಸೊಗಸಿದ ಸಂಧ್ಯಾರಾಗದ ಸಮ್ಮಿಲನ"
ಅದೆಷ್ಟು ಕಾಲವಾಯ್ತು , ಹೀಗೆ ಸಂಜೆಯ ಸಂಗೀತ ಕೇಳಿ. ಬಹುಕಾಲದ ನಂತರ ಸಂಗೀತದ ಸಂಗತಿಯಲ್ಲಿ ತೇಲಿದ ನಂತರ ಆನಂದ ಹಂಚದಿರಲು ಮನಸಾಗಲಿಲ್ಲ...ಆ ಅಂತರಂಗದ ಆಗ್ರಹಕ್ಕೆ ಮಣಿದು ಈ ಅಭಿವ್ಯಕ್ತಿ.
ಪ್ರಸಿದ್ದ ಸಂಗೀತಗಾರ ಪಂಡಿತ್ ಗಣಪತಿ ಭಟ್ ಹಾಸಣಗಿ ಯವರ ಹಾಡಿಗೆ ಚಪ್ಪಾಳೆ ಸುರಿಮಳೆ. ಅಲ್ಲಲ್ಲಿ ವಾಹ್ಕಾರ..ಕ್ಯಾ ಬಾತ್ ಹೇ...ಎಂಬ ಉದ್ಘಾರ. ನಿಜಕ್ಕೂ ತಲೆದೂಗುವ ಸಂಗೀತವು, ಕಿಕ್ಕಿರಿದು ನೆರೆದ ರಸಿಕರಿಗೆ, ರಸದೌತಣವೇ ಸರಿ. ಷಡ್ಜದಲ್ಲಿ ನಿಂತ ಸಂಗತಿ ಅನನ್ಯ ಪರಿ. ನಾದದಲಿ ತಾನೂ ಒಂದಾಗಿ ಒಂದಾಗಿಸಿ, ನಾನು ಇಲ್ಲ ಎನ್ನುವಂಥ ಕರಗಿಹೋಗುವ ಅನುಭೂತಿ ನಿಡುವುದಿದೆಯಲ್ಲ ಅದು ಸಂಗೀತದ ಶಿಖರ ಎಂದು ನನ್ನ ಭಾವನೆ. ಆ ಅನುಭವ ನೇರ ಕಾರ್ಯಕ್ರಮದ ತಲ್ಲೀನ ಭಾವದ ಶ್ರೋತೃವಿನಿಂದ ಆಗುತ್ತದೆ. ಇದೇ ಮನಮುಟ್ಟುವ ಸಂಗೀತ.
ಹೌದು ಮನ ಮುಟ್ಟುವ ಸಂಗೀತ ಯಾವುದು? ಪಂ. ಗಣಪತಿ ಭಟ್ಟರೇ ಹೇಳುವಂತೆ, ಪ್ರತಿಯೊಬ್ಬನೂ ಹಾಡುವ ಮೊದಲು ತನಗಾಗಿ ಹಾಡುತ್ತಾನೆ.. ಹಾಡಬೇಕು. ತನ್ನಲ್ಲಿನ ಶ್ರೋತೃ ಕೇಳಿದ ಬಳಿಕವೇ,ಅದು ಬಾಹ್ಯ ಕೇಳುಗರಿಗೆ ವೇದ್ಯವಾಗುತ್ತದೆ. ಅಲ್ಲಿ ಪ್ರಯತ್ನ ಪ್ರಾಮಾಣಿಕವಾಗಬೇಕು. ತನ್ನೊಳಗಿನ ಶ್ರೋತೃ ತೃಪ್ತನಾದರೆ ಇತರರೂ ತೃಪ್ತರಾಗುತ್ತಾರೆ. ಇದು ನಿಸ್ಸಂಶಯ. ಅಂತಹ ಸಂಗೀತ ಮನಮುಟ್ಟುತ್ತದೆ. ಅಷ್ಟೇ ಏಕೆ ಮನ ಗೆಲ್ಲುತ್ತದೆ. ಕೊನೆತನಕ ಉಳಿಯುತ್ತದೆ.
ಸಂಗೀತ ಸಿದ್ಧ ಸರಕಲ್ಲ. ಸಂಗೀತ ಎಂಬುದು ಆಗತಾನೇ ಸೃಷ್ಟಿಯಾಗುವಂಥ ವರ್ತಮಾನ. ಹಿಂದೆ ಮಾಡಿದ ಅಭ್ಯಾಸ, ಸಾಧನೆ, ಪ್ರಶಸ್ತಿ, ಅಧ್ಯಯನ ಎಲ್ಲಾ ಪ್ರಸ್ತುತಿಯ ಸಮಯದಲ್ಲಿ ಲೆಕ್ಕಕ್ಕೆ ಬರದು. ಅವೆಲ್ಲ ಇತಿಹಾಸ ಆಗಿಹೋದದ್ದು. ಅವನ್ನು ಪಕ್ಕಕ್ಕೆ ಇಟ್ಟು ಇಂದಿನ ಹಾಡು ಹಾಡುವುದು ಮುಖ್ಯ. ಅದು ಚೆನ್ನಾಗಿರಬೇಕು. ಎರಡು ತಂಬೂರಿ ಮಧ್ಯೆ ಕೂತು ರಾಗ ಆರಂಭಿಸುವುದು ತನ್ನ ಕೆಲಸ, ಅದು ಮೇಲೆ ಕೈ ಹಿಡುದು ಕೊಂಡೊಯ್ಯುತ್ತದೋ, ಕೆಳಕ್ಕೆ ಕೆಡವುತ್ತದೆಯೋ ಗೊತ್ತಿಲ್ಲ. ರಾಗ ಮುನಿಯುವುದೋ ಒಲಿಯುವುದೋ ಗೊತ್ತಿಲ್ಲ.. ಎಂದು ಪೀಠಿಕೆ ಇಟ್ಟು ಮಾತಿನಿಂದ ತೊಡಗಿ ರಾಗಕ್ಕೆ ಶುರುವಿಟ್ಟಿಕೊಂಡಿತು.
ಸಂಗೀತವನ್ನು ಬಂದು ಖುದ್ದಾಗಿ ಕೇಳಬೇಕು. ಅದು ಬಿಟ್ಟು ಮುದ್ರಣ ಮಾಡಿ ಎಲ್ಲೆಲ್ಲೋ ಹಂಚುತ್ತ ಕೂರಬೇಡಿ. ಈ ಕ್ಷಣವನ್ನು ಆನಂದಿಸಿ. ಸಂಗೀತದ ಘನತೆ ಗಾಂಭೀರ್ಯ ಹಾಳುಗೆಡುವತ್ತದೆ ಅದು. ಸಂಗೀತ ಸುಲಭವಾಗಿ ಸಿಗುವ ಅಗ್ಗದ ಸರಕಾಗಬಾರದು, ಎಂದ ಕೂಡಲೇ ಹಾಡುಗಾರರ ಎದುರೇ ಎದ್ದ ಒಂದಷ್ಟು ಮೊಬೈಲುಗಳು ಕೆಳಗಿಳಿದವು.
ತಂಬೂರದ ಝೆಂಕಾರ..ತಬಲಾ ಸದ್ದು,
ಹಾರ್ಮೋನಿಯಂ ಸ್ವರ...ಮೂಡಿ ಬಂದಂತೆ ಸಂಜೆಯು ರಾತ್ರಿಯತ್ತ ಸಾಗುತ್ತ , ತಾನು ತೆರವಾಗಿ ರಾಗಕ್ಕೆ ಸ್ವಾಗತ ಕೋರಿತ್ತು.
ರಾಗ್... "ಧ ನ ಕೋನಿ ಕಲ್ಯಾಣ.."
ಇದು ಅಪ್ರಚಲಿತ ರಾಗ. ಧೈವತ ಇಲ್ಲ ಅರ್ಥಾತ್ ಧ ವರ್ಜ್ಯ. ಕೋಮಲ ನಿಷಾದ ಬಳಕೆ. ಕಲ್ಯಾಣ ರಾಗದ ಛಾಯೆಯ ಚಲನೆ. ಆದ ಕಾರಣ ಧ ನ, ಕೋ ನಿ ಕಲ್ಯಾಣ ಎಂಬ ಸುಂದರ ಸಂಕ್ಷಿಪ್ತ ವಿವರಣೆ ಪಂಡಿತ್ ಗಣಪತಿ ಭಟ್ಟರು ನೀಡಿದ್ದು ಸಂಗೀತ ವಿದ್ಯಾರ್ಥಿಗಳಿಗೆ, ಅಭ್ಯಾಸಿಗಳಿಗೆ ಒಂದು ಪ್ರಾಯೋಗಿಕ ಕಲಿಕೆಯೇ ಆದಂತಾಯಿತು !!
"ಸರಸ ಸುರ ಗಾ...." ಎಂದು ವಿಲಂಬಿತ ಗತಿಯಲ್ಲಿ ಚಾಲೂ ಮಾಡಿದರೆ
'ದೇಖ ಚಂದಾ ' ಎಂಬ ದ್ರುತ್ ಗತಿಯ ಬಂದಿಶ್ ಹಾಡಿ ರಾಗ ಮುಕ್ತಾಯ.
ರಾಗ ದೇಸ್ ನಲ್ಲಿ ತೇರೋ ಹಿ ಧ್ಯಾನ್ ಧರತಾ ಹೂ..' ರಚನೆಯನ್ನು ಭಾವಪೂರ್ಣವಾಗಿ ಹಾಡಿದರು.
ರಾತ್ರಿ ಒಂಬತ್ತು ಮುಕ್ಕಾಲು ಆಗಿತ್ತು,
"ಚಕೋರಂಗೆ ಚಂದ್ರಮನ ಬೆಳಗಿನದೇ ಚಿಂತೆ" ಭೈರವಿಯಲ್ಲಿ ಹಾಡಿದ್ದು, ನನಗೆ, radii ಗುರು ಬಸವರಾಜ ರಾಜಗುರುಗಳನ್ನು ನೆನಪಿಸಿತು.
ಅಂತೂ ಭರಪೂರ ಚಪ್ಪಾಳೆ. ಅದರೊಂದಿಗೆ ಕಛೇರಿ ಸಂಪನ್ನ.
ಮಧ್ಯ ಮಧ್ಯ ನಾಲಕ್ಕೈದು ಸಾರಿ ಷಡ್ಜದ ಮೇಲೆ ನಿಂತ ಪರಿ ಇತ್ತಲ್ಲ..ಉಸಿರು ಹಿಡಿವಂಥದ್ದು. ಅದು ಇಪ್ಪತ್ತು ಮೂವತ್ತು ಸೆಕೆಂಡುಗಳ ಕಾಲ ಕೂದಲೆಳೆಯ ದನಿಯಲ್ಲಿ ತಂಬೂರ ದೊಡನೆ ಐಕ್ಯವಾಗಿ ಬೆರೆತ ಪರಿ ಆಹಾ...ಕೇಳಿಯೇ ತೀರಬೇಕು.
ನಂತರದ ತಾರಾನ ಹಾಡಿದ್ದು ಮನಸ್ಸನ್ನು ಥಕ ಥೈ ಎಂದು ನರ್ತಿಸುವಂತೆ ಮಾಡಿಬಿಟ್ಟಿತೆಂದರೆ ಅತಿಶಯವೇನಲ್ಲ.
ಆಲಾಪ್, ಸರ್ಗಮ್, ತಾನ್, ಗಮಕ್ನ ಕುಸುರಿ ಕೆಲಸಗಳು ಪುಷ್ಕಳವಾಗಿದ್ದವು.
ಕಾರ್ಯಕ್ರಮ ಆಯೋಜಿಸಿ ಇದಕ್ಕೆಲ್ಲ ಕಾರಣವಾದ ಸಂಹಿತಾ ಸಂಗೀತ ಸಂಸ್ಥೆಗೆ ಕೃತಜ್ಞತೆ ಹೇಳದಿದ್ದರೆ ಹೇಗೆ. ಸಂಘಟಕರಿಗೆ ಧನ್ಯವಾದ ಸಲ್ಲುತ್ತದೆ. ಬರ ಬರುತ್ತಲೆ ಸ್ವಾಗತಿಸಿದ ವಿದ್ಯಾರ್ಥಿ ಸ್ವಯಂಸೇವಕರು ಆದರಕ್ಕೆ ಪಾತ್ರರು. ಚಿಕ್ಕ ಮಕ್ಕಳಿಂದ ಹಿಡಿದು ಕಾರ್ಯಕರ್ತರೆಲ್ಲ ಸಿಂಧೂರ ವರ್ಣದ ನಿಲುವಂಗಿ-ಸಮವಸ್ತ್ರವನ್ನು ಧರಿಸಿ ಓಡಾಡುತ್ತ ಎಲ್ಲವನ್ನೂ ನಿರ್ವಹಿಸಿದ್ದು ಅಚ್ಚುಕಟ್ಟಾಗಿತ್ತು.
ಟಿ ಆರ್ ಸಿಯ ಹೊಸ ಸಭಾಂಗಣವೂ ವಿಶಾಲವಾಗಿ ಸುಂದರವಾಗಿ ನಿರ್ಮಿರ್ಸಿದ್ದು ಒಂದು ಅನುಕೂಲಕರ ಮಹೋಲ್ ಅನ್ನು ಸೃಷ್ಟಿ ಮಾಡಿದ್ದು ಉಲ್ಲೇಖಿಸಲೇಬೇಕು. ಶಾಸ್ತ್ರೀಯ ಸಂಗೀತಕ್ಕೆ ಸಭಾಂಗಣವೂ ಸರಿಯಾಗಿದ್ದರೆ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಶಿರಸಿ ನಗರಕ್ಕೆ ಇಂಥ ಸುಸಜ್ಜಿತ ಸಂಗೀತಯೋಗ್ಯ ಸಭಾಂಗಣಗಳ ಅಗತ್ಯವಿದೆ.
ಹಾಂ, ತಬಲಾದಲ್ಲಿ ವಿಶ್ವನಾಥ್ ನಾಕೋಡ ಸುಂದರಬಾಗಿ ಸಾಥ್ ನೀಡಿದರೆ, ಇಕ್ಕೆಲಗಳಲ್ಲಿ ತಂಬೂರಿ ಹಿಡಿದು ಕೂತವರು ಸಂಗೀತಾ ಭಟ್ ಮತ್ತು ವಿನಾಯಕ ಹೆಗಡೆ ಹಿರೆಹದ್ದ. ಸಂವಾದಿನಿಯಾಗಿ ಭರತ್ ಹೆಗಡೆ ಹೆಬ್ಬಲಸು ಹಾರ್ಮೋನಿಯಮ್ನಲ್ಲಿ ಸುಲಲಿತವಾಗಿ ಗಣಪತಿ ಭಟ್ಟರನ್ನು ಹಿಂಬಾಲಿಸಿದರು.
ಸಂಗೀತ ಸಮ್ಮೇಲೈಸುವುದೇ ಹೀಗೆ ಅಲ್ಲವೇ. !!
ನನ್ನ ಮನಸಿಗೆ ಹೇಳಬೇಕನಿಸಿದ್ದು ಇಷ್ಟು.
ಇದು ನನ್ನಂತೆಯೇ ಅಪೂರ್ಣವೆಂಬುದು ಅಫಿಡವಿಟ್ಟು.
(ಸಾಂದರ್ಭಿಕ ಚಿತ್ರ: ಅಂತರ್ಜಾಲ)
#ಹಳೆಯನೆನಪು
#ಮಹೇಂದ್ರ_ಸಂಕಿಮನೆ
Comentários