ಮಹೇಂದ್ರ ಸಂಕಿಮನೆ

Mar 91 min

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ|

ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ||

ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ.

ಇಂದು ದುಡ್ಡು ಎಲ್ಲರ ಬಳಿಯೂ ಇದೆ.

ಏನೋ ಕೆಲಸ ಮಾಡಿ ಸಾವಿರ ರೂ ಬೇಗ ಸಂಪಾದಿಸುತ್ತಾರೆ. ಅದರಿಂದ ಏನಾದರೂ ಮಾಡಬಹುದು ಏನುಬೇಕಾದರೂ ಮಾಡಬಹುದು ಎಂದು ಮನುಷ್ಯರು ಮೆರೆಯುತ್ತಾರೆ. ಹಾಗೆ ಮೆರೆಯುವ ಭರದಲ್ಲಿ ಮೈ ಮರೆತು ಭೂಮಿಯನ್ನು ಶೋಷಣೆ ಮಾಡುತ್ತಾರೆ. ಪ್ರಕೃತಿ ಮಾತೆಯನ್ನೇ ಮರೆತು, ಹಾಳುಗೆಡವುತ್ತಾರೆ. ಹಣದ ಅಮಲು ನೀರು ಆಹಾರ ಒಳ್ಳೆಯ ಮಾತು ಸಂಬಂಧ ಪ್ರಕೃತಿ ಎಲ್ಲವನ್ನೂ ಮರೆಸಿದೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಹಿತ್ತಲಬಾವಿ ತೋಡಿದಂತೆ ಮಾಡುವಷ್ಟು ನೀರು ಪೋಲು ಮಾಡಿ, ನೀರು ಕೊಡುವ ಕೆರೆಗಳನ್ನೇ ನುಂಗಿ ನೀರ್ಕುಡಿದ ಕಾರಣ ಕುಡಿಯುವ ನೀರಿಗೆ ಈಗ ಹಾಹಾಕಾರ ಎದ್ದಿದೆ.

ಮಹಾನಗರ ಬೆಂಗಳೂರಲ್ಲಿ ಈಗ ನೀರಿಗೆ ಬರ. ಕಾವೇರಿ ನೀರು ನಂಬಿದ ನಗರ ಇದು. ಅತ್ತ ಕಾವೇರಿ ನದಿ ಬತ್ತಿದೆ. ಮಳೆ ಇಲ್ಲ. ಸಾವಿರ ಸಾವಿರ ಬೋರ್ವೆಲ್ಗಳು ಬತ್ತಿದೆ. ಸಾವಿರ ಅಡಿ ಕೊರೆದರೂ ನೀರು ಬರದಂತಾಗಿದೆ. ಒಂದುವರೆ ಕೋಟಿ ಜನರಿರುವ ನಗರ ಕಥೆ ಶೋಚನೀಯವಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಈಗ ಬಂಬ್ಡಾ ಹೊಡೆಯುತ್ತಿವೆ. ಸರ್ಕಾರಕ್ಕೂ ಕೂಡ ಇದೊಂದು ದೊಡ್ಡ ಸವಾಲು. ಸಾಲ ಮಾಡಿದರೆ ಮನ್ನಾ ಮಾಡಬಹುದು,ಅಕ್ಕಿ ಬೇಕಾದರೆ ದಾಸ್ತಾನು ಮಾಡಿ ಕೊಡಬಹುದು, ಬೇಕಾದ ಸೌಲಭ್ಯ ಸಬ್ಸಿಡಿ ಕೊಡಬಹುದು. ಆದರೆ ನೀರು ಕೊಡುವುದು ಇದೆಯಲ್ಲ ಅದೇ ಕಷ್ಟ. ಮತ್ತು ಈ ಜೀವಜಲವಿರದೆ ದಿನಚರಿ ಆರಂಭ ಆಗುವುದೇ ಇಲ್ಲ. ತೊಳೆದುಕೊಂಡರೆ ತಾನೆ ಯಾರಿಗಾದರೂ ಮುಖ ತೋರಿಸುವುದು !!

ಕೆರೆಗಳ ಬೀಡಾಗಿದ್ದ ನಗರ ಬೆಂಗಳೂರು. ಲೇ ಔಟು , ಕಟ್ಟಡ, ಮಾಲುಗಳು ಅಪಾರ್ಟ್‌ಮೆಂಟ್ , ಕಾಂಪ್ಲೆಕ್ಸ್ ಇವೆಲ್ಲ ಕೆರೆಗಳ ಮೇಲೆ ನಿಂತಿವೆ. ನೆಲದೊಳಗೆ ನೀರು ಇಂಗಲು ಜಾಗವಿಲ್ಲ. ಕಾಂಕ್ರೀಟ್ ಕಾಲುವೆ, ಡಾಂಬರು ರಸ್ತೆ ನೀರೆಲ್ಲಿ ಇಂಗಬೇಕು? ನೆಲಬ ಬಾಯಿಗೆ ಸಿಮೆಂಟು ಹಾಕಿದರೆ ಭೂಮಿ ನೀರು ಕುಡಿದೀತಾ ? ಬೆಳವಣಿಗೆ , ಹಣದ ಹರಿವಿನ ಆಸೆ , ಅಭಿವೃದ್ಧಿಗಳ ಹೆಸರಲ್ಲಿ ಭೂಮಿ ಬರಡಾಗಿದೆ. ಇಂದು ದಾಹ ಇಂಗಲು ನೀರಿಲ್ಲ. ಈಗ ಕೂಗಿದರೆ ಕಬ್ಬರಿದರೆ ನೀರು ಚಿಮ್ಮಿ ಬರುವುದಿಲ್ಲ. ಬೇಸಿಗೆ ಧಗೆ ಅಧಿಕವಾಗಿದೆ. ಮುಂಗಾರು ಬರುವವರೆಗೂ ನದಿ ನೀರು ಸಿಗದು.

ಏನು ಮಾಡೋಣ ಈಗ ಹೇಳಿ?

    20
    0