ಮಹೇಂದ್ರ ಸಂಕಿಮನೆ

Mar 91 min

ಅಂತರಾಳ

ಅಂತರಾಳ

ಬದುಕುತ್ತೇವೆ. ನಾವೆಲ್ಲರೂ ಬದುಕಿಯೇ ಇದ್ದೇವೆ. ಏನಾದರೊಂದು ದುಡಿಮೆ ಮಾಡುತ್ತಿದ್ದೇವೆ. ಬಿಡುವಿರದೆ ಹಣ ಗಳಿಸುವ ಕಾಯಕದಲ್ಲಿ ತೊಡಗಿದ್ದೇವೆ. ವಾರಕ್ಕೊಂದು ದಿನ ಬಟ್ಟೆ ತೊಳೆಯುತ್ತೇವೆ. ಸರಿಯಾಗಿ ಮಿಂದು ಬೆಳಗುತ್ತೇವೆ. ನಿದ್ದೆ ಮಾಡುತ್ತೇವೆ. ತಿನ್ನುತ್ತೇವೆ. ಸಾಕಪ್ಪ ಸಾಕು ಎಂದುಕೊಳ್ಳುತ್ತ ಈ ಜಂಜಾಟದಿಂದ ಬಿಡಿಸಿಕೊಂಡು ಎಲ್ಲ ಮರೆಯಲು ತಿರುಗಾಡಲು ಹೋಗುತ್ತೇವೆ ಅಥವಾ ಮತ್ತೇನಾದರೂ ಮಾಡಿ ಮಾಡಿದ್ದನ್ನು ಇಡೀ ವಾರವನ್ನು ಮರೆಯುತ್ತೇವೆ. 

ನಾವು ಯಾಕೆ ಮರೆಯುತ್ತೇವೆ ಎಂದರೆ ಅದು ನಮ್ಮ ನೆನಪಲ್ಲ, ಕನಸಲ್ಲ, ನಮ್ಮ ಕೆಲಸ ಮಾತ್ರ. 

 ಹಾಗೇ ಮಧ್ಯಾಹ್ನ ನಾಸ್ಟಾಲಜಿಯ ರೀಲ್ಗಳನ್ನು ನೋಡಿ ಮೆಲುಕು ಹಾಕುತ್ತೇವೆ. ಹಾಗೇ ಆಲೋಚನೆ ಮಾಡುವ ಪುರುಸೊತ್ತಿದ್ದರೆ ಅಂತರಾಳಕ್ಕೆ ತಲುಪುತ್ತೇವೆ. ಅಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತೇವೆ. 

ದ್ವಾರಕೆ ಎಂಬ ಸುಂದರ ಪಟ್ಟಣವಿತ್ತು. ಅದು ಕೃಷ್ಣ ವಾಸವಿದ್ದ ಪಟ್ಟಣ. ಕೃಷ್ಣನ ನಂತರ ಅದು ಮುಳುಗಿ ಈಗ ಸಾಗರದಾಳಕ್ಕೆ ಹೋದರೆ ಮಾತ್ರ ಆ ನಗರದ ಅವಶೇಷಗಳು ಕಾಣುತ್ತವೆ. ಅದನ್ನು ಕಂಡು ಒಂದು ಧನ್ಯತೆ ಭಾವ ಮೂಡುತ್ತದೆ. ವಾಹ್ ಎಂಬ ಉದ್ಗಾರಕ್ಕೆ ಕೈಗಳು ಜೋಡಿಸಲ್ಪಡುತ್ತವೆ.  ಸಮುದ್ರದ ಆಳದಲ್ಲಿ ಹೇಗೆ ದ್ವಾರಕೆ ಮುಳುಗಿದೆಯೋ ನಾವೂ ಕೂಡ ನಮ್ಮ ಕನಸನ್ನು ಮುಳುಗಿಸಿದ್ದೇವೆ. ಇನ್ ಫ್ಯಾಕ್ಟ್ ನಮ್ಮನ್ನೇ ಮುಳುಗಿಸಿದ್ದೇವೆ. ನಮ್ಮ ಮೂಲ ಮೂರ್ತಿ ಮುಳುಗಿದೆ. ಎಲ್ಲರಗೂ ಕಾಣುವಂಥ ಉತ್ಸವ ಮೂರ್ತಿಯಾಗಿ ನಾವಿದ್ದೇವೆ. 

ಯಾವುದೋ ಚಿತ್ರ ಕಲೆಯೋ, ಹಾಡೋ... ಕುಣಿತವೋ, ಪ್ರತಿಭೆಯೋ ಏನೋ ಒಂದು ನಮಗೆ ಆಗಲೂ ಖುಷಿ ಕೊಡುತ್ತಿತ್ತು. ಈಗಲೂ ಅದು ಖುಷಿ ಕೊಡುತ್ತದೆ. ಅದಕ್ಕೆ ಮನಸು ಸದಾ ತುಡಿಯುತ್ತದೆ. ಅಂತರಾಳಕ್ಕಿಳಿದಾಗ ಒಮ್ಮೆ ನೆನಪಾಗುತ್ತದೆ. ಅದರಿಂದ ನನ್ನ ಜೀವನಕ್ಕೊಂದು ಅರ್ಥ ಆನಂದ ಸಾರ್ಥಕತೆ ಬರುತ್ತಿತ್ತು ಎಂದು ಅನಿಸಿಯೇ ಅನಿಸುತ್ತದೆ. ಯಾರು ಅವರಿಷ್ಟದ ಕೆಲಸವನ್ನು ಮಾಡುತ್ತಾರೋ ಅವರು ನೂರಕ್ಕೆ ನೂರು ಬದುಕುತ್ತಾರೆ. ಉಳಿದಂತೆ ಶೂನ್ಯ ಸುತ್ತುವ ವೃಥಾಲಾಪ.

ಹೇಳಿ ನೀವೇನಾಗಿದ್ದಿರಿ? ಈಗ ನೀವೇನಾಗಿದ್ದೀರಿ ?

    20
    0